ತುಳುವೇಶ್ವರ ತುಳುನಾಡಿನ ವೈಭವ
ಬಸ್ರೂರು ತುಳುವೇಶ್ವರದಲ್ಲಿ ನಡೆದ ತಾಂಬೂಲ ಪ್ರಶ್ನೆ ಚಿಂತನೆ ಪ್ರಕಾರ ಅಖಂಡ ತುಳುನಾಡಿನ ಜನಪದ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಒಳಗೊಂಡ ಹಾಗೂ ತುಳುನಾಡಿನ ಪೂರ್ವ ಪರಂಪರೆಯನ್ನು ವೈಭವೀಕರಿಸಿದ ಸಾನಿಧ್ಯವಾಗಿದೆ ತುಳುವೇಶ್ವರ. ಈಗ ಹುಟ್ಟಿದ ಅದೇ ರೀತಿ ಮುಂದೆ ಹುಟ್ಟುವ ಮಕ್ಕಳಿಗೂ ಜಾತಿ ಮತ ಭಾಷೆ ಭೇದವಿಲ್ಲದೆ ಈ ದೇವರ ಆರಾಧನೆ ಜೀವನ ಸಾರ್ಥಕತೆಗೆ ಮತ್ತು ಯಶಸ್ವಿಗೆ ಅತಿ ಅಗತ್ಯ.
ಸಂಪೂರ್ಣ ಏಕೀಕೃತ ತುಳುನಾಡನ್ನೇ ವ್ಯಾಪಿಸಿದ್ದ ಈ ತುಳುವೇಶ್ವರ ಹಾಗೂ ತೌಲವೇಶ್ವರಿ ಮತ್ತು ಪಂಜುರ್ಲಿ ದೈವ ಅಂತೆಯೇ ಪರಿವಾರ ದೈವ ದೇವರುಗಳ ಆರಾಧನೆ ಹಲವಾರು ಶತಮಾನಗಳಿಂದ ದಿಕ್ಕು ತಪ್ಪಿದೆ. ಆದರೂ ತುಳುನಾಡಿನ ಪ್ರತಿ ಮನೆಗಳಲ್ಲೂ ವಿವಿಧ ರೂಪಗಳ ಆರಾಧನೆಯಿಂದ ಈ ದೈವ ದೇವರುಗಳ ಕೃಪೆ ನಿರಂತರ ಇದೆ. ಈ ಆರಾಧನಾ ಸಂಸ್ಕೃತಿಯನ್ನು ಪುನಃ ಸ್ಥಾಪನೆ ಮಾಡಿದರೆ ತುಳುನಾಡಿಗೆ ಅಲ್ಲದೆ ತುಳುನಾಡಿನ ಪ್ರತಿಯೊಬ್ಬರಿಗೂ ಶ್ರೇಯಸ್ಕರ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದೆ.
ಈ ಬಗ್ಗೆ ತುಳುನಾಡಿನ ಪ್ರತಿಯೊಬ್ಬರೂ ಕೂಡ ಈ ದೇವಸ್ಥಾನದ ಮರುವೈಭವಕ್ಕೆ ಸಾಕ್ಷಿ ಆಗಬೇಕು. ಓರ್ವ ವ್ಯಕ್ತಿಯೇ ಈ ಕ್ಷೇತ್ರ ಜೀರ್ಣೋದ್ಧಾರ ಮಾಡಲು ಮುಂದೆ ಬರುತ್ತಾರೆ. ಆದರೆ ತುಳುನಾಡಿನ ಪ್ರತಿಯೊಬ್ಬರ ಕೊಡುಗೆಯನ್ನು ದೇವರು ಬಯಸುತ್ತಾರೆ. ಅದಕ್ಕಾಗಿ ಮುಂದೆ ಅಷ್ಟಮಂಗಳ ಪ್ರಶ್ನೆ ಚಿಂತಿಸುವ ಮೊದಲು ತುಳುನಾಡಿನ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪಬೇಕು ಹಾಗೂ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಬಂದು ಸೇರಿ ಕೈಜೋಡಿಸಬೇಕು ಹಾಗೂ ಶಾಶ್ವತ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಬೇಕು ಎಂದು ಪ್ರಶ್ನೆ ಚಿಂತನೆಯಲ್ಲಿ ತಿಳಿದು ಬಂದಿದೆ.
ಈ ಬಗ್ಗೆ ಕಾರ್ಯಾಚರಿಸಲು ತುಳುವರ್ಲ್ಡ್ ಫೌಂಡೇಶನಿನ ಮತ್ತು ಎಲ್ಲಾ ತುಳುಕೂಟಗಳ ಹಾಗೂ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ತುಳುನಾಡಿನ ಪ್ರತಿ ಗ್ರಾಮಗಳಲ್ಲೂ ಹಾಗೂ ಎಲ್ಲೆಲ್ಲಿ ತುಳುವರಿದ್ದಾರೊ ಅಲ್ಲಿ ತುಳುವ ಮಹಾಸಭೆ ರಚಿಸಿ ಕಾರ್ಯ ಪ್ರವೃತ್ತರಾಗಲು ಅನುಮತಿ ಪ್ರಶ್ನೆ ಚಿಂತನೆಯಲ್ಲಿ ಲಭಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಜಾಗೃತಿಯನ್ನು ಮೂಡಿಸಿ ಈ ಮಹತ್ಕಾರ್ಯವನ್ನು ಯಶಸ್ವಿಗೊಳಿಸಬೇಕು ಹಾಗೂ ನಮ್ಮ ನಮ್ಮ ಊರಿನಲ್ಲಿ ಈ ಬಗ್ಗೆ ಸಮಿತಿ ರಚಿಸಲು ಮುತುವರ್ಜಿ ವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ