ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟದ ದೈವ ಬೀರ್ನಾಳ್ವ
(ಬೋಳ, ಮುಕ್ಕೂರು, ಕುಂಡಾಪು, ಕೋಟೆಂಜ,ವಳಮಲೆ/ಕಡಾರ್, ಕಳೇರಿ, ಪುಂಗೊಡಿ ಮಾಡದಲ್ಲಿ ನೆಲೆಯಾದ ಸತ್ಯ ಬೀರ್ನಾಳ್ವ) (ಬರಹ : ರೋಹಿತ್ ಬಿರ್ವ ಪಡುಮಲೆ)
ಸತ್ಯದ ಸೀಮೆ ಎಂದೇ ಕೊಂಡಾಡಲ್ಪಟ್ಟ ಕುಂಬಳೆ ಮೂರು ಸಾವಿರ ಸೀಮೆಯಲ್ಲಿ ಅಡೂರು, ಮಧೂರು, ಕಾವು, ಕನ್ಯಾರ (ಕಣಿಪುರ) ಎಂಬ ನಾಲ್ಕು ಸ್ಥಾನಗಳು ನಾಲ್ವರು ದೇವರಿಗೆ. ಪಡುಮಲೆ, ಪೈಕ, ಬೆದ್ರಡ್ಕ,ಪುತ್ತಿಗೆ ಎಂಬ ನಾಲ್ಕು ಸ್ಥಾನಗಳು ಇರ್ವರು ಅರಸು ಉಳ್ಳಾಕುಲು ದೈವಗಳಿಗೆ (ಆದಿ ಪರ್ಮಲೆ - ಅಂತ್ಯ ಪುತ್ಯೆ) ಆದಿ ಪುತ್ತೂರು ಕೊಟ್ಯ, ಪಂಜದ ಗುಡ್ಡೆ,ಕೋಟೆಕ್ಕಾರ್, ನಂದ್ರಾಡಿ ಬಾರಿಕೆ ಎಂಬ ನಾಲ್ಕು ಸ್ಥಾನಗಳು ಮೂರುಸಾವಿರ ಸೀಮೆಯ ರಾಜನ್ ದೈವ ಜುಮಾದಿಗೆ.
ಇಂತಹ ಕಾಲದಲ್ಲಿ ಕೈಲಾಸದ ಅಧಿಪತಿಯಾದ ಪರಮೇಶ್ವರನಿಗೆ ಒಂದು ಅಪೇಕ್ಷೆ ಉಂಟಾಗುತ್ತದೆ. ಅದೇನೆಂದರೆ ಸತ್ಯದ ಸೀಮೆಯಲ್ಲಿ ಈ ರೀತಿಯಲ್ಲಿ ದೈವ - ದೇವರು ವೈಭವದಲ್ಲಿ ಮೆರೆಯುವಾಗ ಆ ಸೀಮೆಗೆ ಓರ್ವ ಪಟ್ಟದ ದೈವ ಇರಬೇಕು ಎಂದು ಮನದಲ್ಲಿ ಯೋಚಿಸಿದ ಸಂದರ್ಭ ಕೈಲಾಸದಲ್ಲಿ ಶಿವಪಾರ್ವತಿಯರು ನರೇಶ್ವರನಾಗಿ (ಅರ್ಧನಾರೀಶ್ವರನಾಗಿ) ಸತ್ಯದ ಸೀಮೆಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಬೇಕೆಂದು ಸನ್ನದ್ಧರಾಗುತ್ತಾರೆ.
ಅದೇ ವೇಳೆಗೆ ಕುಂಬ್ಳೆ ಸೀಮೆಯ ವ್ಯಾಪ್ತಿಯಲ್ಲಿ ಮಾಯಿಪ್ಪಾಡಿ ಅರಮನೆಗೆ ಸಮೀಪದ "ಬೋಳ" ಎಂಬ ಹೆಸರಿನ ಒಂದು ಊರಿನಲ್ಲಿ ಬೀರಣ್ಣ ಎಂಬ ಹೆಸರಿನ ಬಂಟ ಸಮುದಾಯದ ಓರ್ವ ಹುಡುಗ ಇರುತ್ತಾನೆ. ಆತನ ದಿನಚರಿಯಲ್ಲಿ ದನವನ್ನು ಮೇಯಿಸುವ ಕಾರ್ಯವೂ ಒಂದು. ಹೀಗೆ ದನ ಮೇಯಿಸುತ್ತ ಬೋಳದ ಬಯಲಿನಲ್ಲಿ ಬೀರಣ್ಣ ಇರುವ ಸಂದರ್ಭದಲ್ಲಿ ಮೇಲೆ ಮೇಘ ಲೋಕದಲ್ಲಿ ಪ್ರಭು ಈಶ್ವರ, ಪಾರ್ವತಿಯರ ಸಂಕಲ್ಪದಲ್ಲಿ ಒಮ್ಮಿಂದೊಮ್ಮೆಗೆ ಗುಡುಗು, ಸಿಡಿಲು, ಮಿಂಚುಗಳ ಝೆಂಕಾರ ಆ ಸಮಯದಲ್ಲಿ ನರೇಶ್ವರನು ಒಂದು ಕಬ್ಬಿಣದ ತುಂಡಿನ ರೂಪಹೊಂದಿ ಆಕಾಶ ಮಾರ್ಗದಿಂದ ಭೂಮಿಗೆ ಸಿಡಿಲಿನೊಂದಿಗೆ ಬೋಳದ ಬಯಲಿನಲ್ಲಿರುವ ಹಳ್ಳವೊಂದಕ್ಕೆ ಬೀಳುತ್ತಾನೆ. ಆ ಕಬ್ಬಿಣದ ತುಂಡು ಹಳ್ಳದಲ್ಲಿ ತೇಲುತ್ತಾ, ಸುತ್ತುತ್ತಾ ಹಳ್ಳದ ದಡಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ ಹಳ್ಳದಲ್ಲಿ ಇರುವ ಕಬ್ಬಿಣದ ತುಂಡನ್ನು ಕಂಡು ಆಕರ್ಷಿತನಾದ ಬೀರಣ್ಣನು ಅತೀವ ಸಂತಸದಿಂದ ಅದನ್ನು ಕೈಯಲ್ಲಿ ಎತ್ತಿಕೊಳ್ಳುತ್ತಾನೆ ಆಗ ಅದರಲ್ಲಿ ಇದ್ದ "ನರೇಶ್ವರನು" (ಅರ್ಧನಾರೀಶ್ವರನು) ಬೀರಣ್ಣನ ಶರೀರಕ್ಕೆ ಆವಾಹನೆ ಆಗುತ್ತಾನೆ. ಬೀರಣ್ಣನು ಕಬ್ಬಿಣವನ್ನು ಹಿಡಿದುಕೊಂಡು ತನ್ನ ಮನೆಯತ್ತ ಧಾವಿಸುತ್ತಾನೆ.
ಮನೆಗೆ ಬಂದ ಬೀರಣ್ಣ ಆ ಕಬ್ಬಿಣದ ತುಂಡನ್ನು ಮನೆಯ ಕನ್ನಿಮೂಲೆಯಲ್ಲಿ ಇಟ್ಟು ತನ್ನ ತಂದೆ-ತಾಯಿಗಳಿಗೆ ತೋರಿಸುತ್ತಾನೆ. ಆಗ ಅವರು ಮಗ ಇದರಲ್ಲಿ ನಮಗೊಂದು ಸೌದೆ,ಸೊಪ್ಪು, ಹುಲ್ಲು ಹೆರೆಯಲು ಕತ್ತಿ ಮಾಡಿಸಬೇಕು. ಆಗ ಬೀರಣ್ಣನು ಈ ಕಬ್ಬಿಣದ ತುಂಡನ್ನು ವಿಶ್ವಕರ್ಮಿಯ ಬಳಿಗೆ ಕೊಂಡು ಹೋಗಿ ಇದರಲ್ಲಿ ಒಂದು ಕತ್ತಿಯನ್ನು ಮಾಡಿಕೊಡಿ ಎಂದು ಹೇಳಿತ್ತಾನೆ.
ವಿಶ್ವಕರ್ಮಿಯು (ಮಠದ ಸಂಸಾರ) ಏಳು ರಾತ್ರಿ ಏಳು ಹಗಲು ಶ್ರಮಿಸಿದರೂ ಈ ಕಬ್ಬಿಣದ ತುಂಡಲ್ಲಿ ಕತ್ತಿಯ ರೂಪವನ್ನು ಬರಿಸುವಲ್ಲಿ ವಿಫಲನಾದನು. ಕಬ್ಬಿಣದ ತುಂಡು ಯಾವ ರೀತಿಯಲ್ಲಿ ಬಡಿದರೂ ಕತ್ತಿಯ ರೂಪ ಪಡೆಯಲಿಲ್ಲ ಬದಲಾಗಿ ಅದು ಒಂದು ದೈವದ "ಕಡ್ತಲೆಯ/ಸುರಿಯದ" (ಪಟ್ಟದ ಕತ್ತಿಯ) ಆಯವನ್ನು, ರೂಪವನ್ನು ಪಡೆಯಿತು.
ಈ ಸೋಜಿಗದ ಸಂಗತಿಯಿಂದ ವಿಚಲಿತರಾದ ವಿಶ್ವಕರ್ಮಿ, ಸೀಮೆಯವರು, ಬೀರಣ್ಣನನ್ನು ಕೂಡಿಕೊಂಡು. ಮಾಯಿಪ್ಪಾಡಿ ಅರಮನೆಗೆ ಧಾವಿಸುತ್ತಾರೆ ಇವರ ಬರುವಿಕೆಯನ್ನು ಕಂಡ ಮಾಯಿಪ್ಪಾಡಿ ಅರಸನು ಇವರನ್ನು ವಿಚಾರಿಸುತ್ತಾರೆ ಆಗ ವಿಶ್ವಕರ್ಮಿಯು ಆ ಕಡ್ತಲೆಯನ್ನು ಅರಸನ ಕೈಗೆ ನೀಡುತ್ತಾರೆ. ಮಾಯಾ ಶಕ್ತಿಯ ಈ ಪವಾಡಗಳನ್ನು ಕೇಳಿದ ಮಾಯಿಪ್ಪಾಡಿ ಅರಸನು ತಾನೇ ಸ್ವತಃ ಈ ಮಾಯಾ ಶಕ್ತಿಯನ್ನು ಪರೀಕ್ಷಿಸಬೇಕು ಎಂದು ತೀರ್ಮಾನಿಸಿ ಅರಮನೆಯ ಕನ್ನಿಮೂಲೆಗೆ ಬಂದು ತಮ್ಮ ಸೊಂಟದ ಬಂಗಾರದ ಉಡಿದಾರವೊಂದನ್ನು (ಒಕ್ಕ ನೆವಲ) ತೆಗೆದು ತಾಮ್ರದ ಕೊಡಪಾನಕ್ಕೆ ಹಾಕಿ ಕೊಡಪಾನದ ಬಾಯಿಯನ್ನು ಕಟ್ಟುತ್ತಾರೆ. ಆ ಕೊಡಪಾನವನ್ನು ಅರಮನೆಯಲ್ಲಿ ಸೇರಿದ ಸಭಿಕರ ಮುಂದೆ ತಂದು ಈ ಬಾಯಿ ಕಟ್ಟಿದ ಕೊಡದಲ್ಲಿ ಏನಿದೆ ಎಂದು ತಿಳಿಸುವಂತೆ ಬೀರಣ್ಣನಲ್ಲಿ ಕೇಳುತ್ತಾರೆ.
ಆಗ ಬೀರಣ್ಣನು ವಿಚಲಿತನಾಗದೆ ಆ ಕೊಡದಲ್ಲಿ ಕೃಷ್ಣಸರ್ಪ ಇದೆ ಎಂದು ಹೇಳುತ್ತಾನೆ. ಬೀರಣ್ಣನು ಆ ರೀತಿ ನುಡಿದ ಕ್ಷಣವೇ ತಾಮ್ರದ ಕೊಡವು ಸ್ಫೋಟ ಗೊಂಡು ಅದರಿಂದ ಕೃಷ್ಣ ಸರ್ಪವು ಬುಸುಗುಡುತ್ತಾ ಹೊರಬರುತ್ತದೆ. (ಅಂಗಾರೆದಿನ ಸಿಂಗಂದ ರಾಶಿಡಾನಿ ಚೊಂಬುದ ಕೊಡಪಾನನ್ ಪುಡತ್ತ್'ದ್ ಒಕ್ಕನೆವಲದ ಬದಲ್'ಗ್, ಕೃಷ್ಣ ಸರ್ಪದ ರೂಪಡ್ ಬತ್ತಿನ ಸತ್ಯ)
ಆಗ ಮಾಯಿಪ್ಪಾಡಿ ಅರಸನು ಆವೇಶಿತ ಬೀರಣ್ಣನಲ್ಲಿ ನೀನು ಮಾಯಾಶಕ್ತಿ ಹೌದಾದರೆ ಯಾರು ನೀನು ಎಂದು ಕೇಳುತ್ತಾರೆ. ಆಗ ಬೀರಣ್ಣನು ತಾನು "ಕೈಲಾಸದಿಂದ ಕುಂಬ್ಳೆ ಮೂರುಸಾವಿರ ಸೀಮೆಗೆ ಧರ್ಮ ದೈವವಾಗಿ ನೆಲೆಸಲು ಬಂದವ, ಬೀರಣ್ಣ ಎಂಬ ಹೆಸರಿನ ಈ ಹುಡುಗನಿಗೆ ಕಬ್ಬಿಣದ ತುಂಡಿನ ರೂಪದಲ್ಲಿ ಸಿಕ್ಕಿದ ನರೇಶ್ವರ (ಅರ್ಧನಾರೀಶ್ವರ) ನಾನು ಎಂದು ಹೇಳಿದನು.ಆಗ ಅರಸನು ಬೀರಣ್ಣನಲ್ಲಿ ಸೇರಿಕೊಂಡ ಮಾಯಾ ಶಕ್ತಿಯಾದ ನಿನಗೇನು ಬೇಕು ಎಂದು ಕೇಳಿದಾಗ ನರೇಶ್ವರನು ಆವೇಶಗೊಂಡು ಬೀರಣ್ಣನು ತನಗೆ ಕುಂಬಳೆ ಸೀಮೆಯ ಪಟ್ಟದ ಅಧಿಕಾರ ಬೇಕು ಎಂದು ಹೇಳುತ್ತಾನೆ.
ಆ ಕ್ಷಣದಲ್ಲಿ ಅರಸ ವಿಶ್ವಕರ್ಮಿಯು ಮಾಡಿದ ಆ ಹೊಸ ಪಟ್ಟದ ಕಡ್ತಲೆಯನ್ನು ಬೀರಣ್ಣನ ಕೈಗಿತ್ತು ಹಿಡಿದುಕೊ ಪಟ್ಟದ ಕತ್ತಿ ಪಟ್ಟದ ದೈವ ಬೀರ್ನಾಳ್ವ ಎಂದು ನೀಡುತ್ತಾರೆ. (ಪತ್ತೊನ್ಲ ಪಟ್ಟದ ಕತ್ತಿ ಪಟ್ಟದ ದೈವ ಬೀರ್ನಾಳ್ವ)
ಆ ಕ್ಷಣ ಪಾರ್ವತಿ ದೇವಿಯು ಬೀರ್ನಾಳ್ವನಿಗೆ ನಾನು ಬೀರಣ್ಣ ಎಂಬ ಹುಡುಗನಿಗೆ ಸಿಕ್ಕಿದ ದೈವ ಈ ಹುಡುಗ ನನ್ನ ಅಧೀನದಲ್ಲಿ ಬೇಕು, ನಿನಗೆ ಸೊಂಟದಿಂದ ಕೆಳಕ್ಕೆ ಪುರುಷ ರೂಪ, ಸೊಂಟದಿಂದ ಮೇಲಕ್ಕೆ ಸ್ತ್ರೀ ರೂಪದಲ್ಲಿ ನಾನಿರುತ್ತೇನೆ ಎಂದು ಆಶಿರ್ವಾದಿಸುತ್ತಾರೆ. ಅಂದಿಗೆ ಬೀರಣ್ಣನು ಕುಂಬಳೆ ಸೀಮೆಯಲ್ಲಿ "ಪಟ್ಟದ ದೈವ ಬೀರ್ನಾಳ್ವ" ಎಂದು ಹೆಸರು ಪಡೆಯುತ್ತಾನೆ".
ಹೀಗೆ ಕುಂಬಳೆ ಮೂರು ಸಾವಿರ ಸೀಮೆಯ ಪಟ್ಟವು ತನಗೆ ಸಿಕ್ಕಿದ ಸಂತಸದಿಂದ ಬೀರ್ನಾಳ್ವ ದೈವವು ತನಗೂ ಈ ಸೀಮೆಯಲ್ಲಿ ನಾಲ್ಕು ಸ್ಥಾನಗಳು ಬೇಕು ಎಂದು ತೀರ್ಮಾನಕ್ಕೆ ಬಂದು... "ಬೋಳ, ಮುಕ್ಕೂರು, ಕುಂಡಾಪು,ಕೊಂಟೆಂಜ"ಎಂಬ ಹೆಸರಿನ ನಾಲ್ಕು ಸ್ಥಾನವನ್ನು ನಿರ್ಮಿಸಿಕೊಳ್ಳುತ್ತದೆ. ಹಾಗೆಯೇ ತಾನು ಕುಂಬಳೆ ಸೀಮೆಯ ಪಟ್ಟದ ದೈವವಾದ ಕಾರಣ ಸೀಮೆಯ ವ್ಯಾಪ್ತಿಯಲ್ಲಿ ತನಗೆ ಆರಾಧನೆ ಪಡೆಯುವ ಎಲ್ಲಾ ಕಡೆಯೂ ಬಲಭಾಗದ ಶಕ್ತಿಯಾಗಿ ನೆಲೆಯಾಗುತ್ತದೆ.ಇಂದಿಗೂ ಕೂಡಾ ಬೀರ್ನಾಳ್ವ ದೈವವು ಮೂಲ ಕಡಾರು, ವಳಮಲೆ, ಕುಂಬ್ಡಾಜೆ, ನೆಕ್ರಾಜೆ, ಬೋಳ, ಮುಕ್ಕೂರು, ಕುಂಡಾಪು, ಕೋಟೆಂಜ ಎಂಬ ಹೆಸರಿನ ಬಂಟ ಸಮುದಾಯದ ತರವಾಡು ಮನೆಯಲ್ಲಿ ಕುಟುಂಬದ ಅಧಿಪತಿ ಧರ್ಮದೈವ ಬೀರ್ನಾಳ್ವನಾಗಿ ಆರಾಧನೆ ನಡೆಯುತ್ತದೆ.
ಹಾಗೆಯೇ ತೆಂಕಣ ತುಳುನಾಡಿನ ಬಹುತೇಕ ಬಂಟ ಸಮುದಾಯದ ತರವಾಡು ಮನೆಯಲ್ಲಿ ಧರ್ಮ ದೈವವಾಗಿ ಬೀರ್ನಾಳ್ವನಿಗೆ ಆರಾಧನೆ ನಡೆಯುತ್ತದೆ.ಅಲ್ಲದೆ ಬೊಳಿಂಜಗುತ್ತು ಕಿನ್ನಿಗೋಳಿ ಮಾಡ, ಬಂಬ್ರಾಣ, ಶ್ರೀಪೂಮಾಣಿ ಕಿನ್ನಿಮಾಣಿ ಕ್ಷೇತ್ರ ಅಂಬಿಲಡ್ಕ, ಬದಿಯಡ್ಕದ ಶ್ರೀಪೂಮಾಣಿ ಕಿನ್ನಿಮಾಣಿ ಕ್ಷೇತ್ರ, ಮತ್ತು ಮಲೆಯಾಳಿ ಗಾಣಿಗರ ಪ್ರಮುಖ ಕ್ಷೇತ್ರ ಶ್ರೀಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಅಲ್ಲಿನ ಪ್ರಮುಖ ದೈವಗಳೊಂದಿಗೆ ಆರಾಧನೆ ನಡೆಯುತ್ತದೆ.
ಮಾಯಿಪ್ಪಾಡಿ ಅರಮನೆಯ ಪಟ್ಟದ ಅಧಿಕಾರವು ಬೀರಣ್ಣನಿಗೆ ಅರಸನು ನೀಡಿದ ಕಾರಣ ಇಂದಿಗೂ ಮಾಯಿಪ್ಪಾಡಿ ಅರಮನೆಯಲ್ಲಿ ನೂತನ ಅರಸರಿಗೆ ಪಟ್ಟಾಭಿಷೇಕ ಮಾಡುವ ಕ್ರಮ ಇಲ್ಲ. (ಅದು ಬೋಳ ಗುತ್ತಿನವರ ಇಚ್ಲಂಪ್ಪಾಡಿ ಮನೆ ಪಡಿಪ್ಪಿರೆಯಲ್ಲಿ ಆಗುವಂತದ್ದು)
ಬರಹ : ರೋಹಿತ್ ಬಿರ್ವ ಪಡುಮಲೆ.
(ಮಾಹಿತಿ : ಶ್ರೀವಿಶ್ವನಾಥ ಪರವ ಪಡುಮಲೆ - ದೈವ ನರ್ತಕರು ಕುಂಬಳೆ ಸೀಮೆ ) (ಸಹಕಾರ - ಶ್ರೀನಾಗಪ್ಪ ಪರವ ಪಡುಮಲೆ. ಉಳ್ಳಾಕುಲು ದೈವಗಳ ಪ್ರಧಾನ ನರ್ತಕರು ಕುಂಬಳೆ ಸೀಮೆ / ಡಾ.ರವೀಶ್ ಪರವ ಪಡುಮಲೆ ದೈವ ನರ್ತಕರು ಹಾಗೂ ಸಿವಿಲ್ ಇಂಜಿನಿಯರ್)
..