Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಕರಂಗೋಲು ಕುಣಿತ:ಅದರ ಸಾಮಾಜಿಕ ಮತ್ತು ಧಾರ್ಮಿಕತೆಯ ನೆಲೆಗಳು

ಭಾಗ ಒಂದು
ತುಳುನಾಡಿನಲ್ಲಿ "ಕರಂಗೋಲು" ಎಂಬ ವಿಶಿಷ್ಟವಾದ ಜಾನಪದ ಕುಣಿತದ ಪ್ರಕಾರವಿದೆ. ಮೇಲ್ನೋಟಕ್ಕೆ ಮನೋರಂಜನಾ ಅಥವಾ ಕ್ರಷಿ ಸಂಬಂಧಿತ ಜಾನಪದ  ಕುಣಿತ ಎಂಬಂತೇ ಕಂಡುಬಂದರೂ, ಅದು ಲೌಕಿಕತೆಯಿಂದ ಅಲೌಕಿಕತೆಗೆ ವಿಸ್ತರಿಸಲ್ಪಟ್ಟ, ಜನಾಂಗದ ವೀರರ ಸಾಹಸಗಳನ್ನು, ಸಾಧನೆಗಳನ್ನು ಹಾಗೂ ಮೂಲನಿವಾಸಿ ಧಾರ್ಮಿಕತೆಯನ್ನು ಪ್ರದರ್ಶಿಸುವ, ಪುನರ್ ಅಭಿನಯಿಸುವ , ಈ ಮೂಲಕ  ಆ ವೀರರ ಆಶಯಗಳನ್ನು  ಪ್ರಸ್ತುತ ಆಧುನಿಕ ಕಾಲದಲ್ಲೂ ಎತ್ತಿ ಹಿಡಿದು ವ್ಯವಸ್ಥೆಗೆ  ತನ್ನ  #ಸಾಂಸ್ಕೃತಿಕ ಪ್ರತಿಭಟನೆಯನ್ನು  ಗೊತ್ತುಪಡಿಸುವ, ತನ್ಮೂಲಕ    ತುಳಿತಕ್ಕೆ ಒಳಗಾದ ಸಮುದಾಯದ  ವಿಶಿಷ್ಟವಾದ ಅಸ್ಮಿತೆಗೆ ಸಾರ್ವಜನಿಕವಾಗಿ ಮನ್ನಣೆ  ಪಡೆದುಕೊಳ್ಳುವ  ಸಮಾಜೋ-ಸಾಂಸ್ಕೃತಿಕ  ಮತ್ತು ಧಾರ್ಮಿಕತೆಯ ಒಂದು ಪಠ್ಯ  ಅಥವಾ ವಿನ್ಯಾಸ ಎಂಬಂತೇ ಕಂಡು ಬರುತ್ತಿದೆ. 

#ಸುಗ್ಗಿಯ ಹುಣ್ಣಿಮೆ ಕಾಲದಲ್ಲಿ  ಕರಂಗೋಲು ಕುಣಿತದ  ಆಚರಣೆಯನ್ನು  ತುಳುನಾಡಿನ ಆದಿ ದ್ರಾವಿಡ ಸಮುದಾಯ ಮೂಲತಃ  ಆಚರಿಸಿಕೊಂಡು ಬಂದಿದೆ. ಈ ಕುಣಿತ ಪ್ರಕಾರವು ಕಾನದ ಕಟದರು ತಮ್ಮ  ಕಾಲದಲ್ಲಿ  ಜನರಿಗೆ ಬಾಧಿಸುತ್ತಿದ್ದ #ಮಾರಿ" ಸಿಡುಬು, ಕಾಲರಾ, ಪ್ಲೇಗ್ ಅಂತಹ ಸಾಂಕ್ರಾಮಿಕ  ರೋಗಗಳನ್ನು  ತಮ್ಮ  ಜಾನಪದೀಯ  ಔಷಧ  ಜ್ಞಾನದಿಂದ ಇಲ್ಲವೇ ಗಿಡ ಮೂಲಿಕೆಗಳಿಂದ ಗುಣಪಡಿಸುತ್ತಿದ್ದರು, ಇಲ್ಲವೇ ಆ ರೋಗಗಳನ್ನು  ನಿವಾರಿಸುತ್ತಿದ್ದರು. ಈ ಮೂಲಕ ಊರಿಗೆ ಅಪ್ಪಳಿಸಿದ "ಮಾರಿ"ಯನ್ನು ಓಡಿಸಿ ಜನರನ್ನು  ಊರನ್ನು  ರಕ್ಷಣೆ  ಮಾಡುತ್ತಿದ್ದರು  ಎಂಬುದನ್ನು  ಸಂಕೇತಿಸುತ್ತದೆ. ಇದರ ಜೊತೆಗೆ ಸುಗ್ಗಿಯ  ಸಂಭ್ರಮವನ್ನು, ವಿಶೇಷವಾದ ಸುಗ್ಗಿ --ಮಾಯಿಯ ಹುಣ್ಣಿಮೆಯನ್ನು, ಇತರ ಕ್ರಷಿ ಸಂಬಂದಿತ ಮನೋರಂಜನೆಗಳನ್ನು ಹಾಗೂ ಮುಖ್ಯವಾಗಿ ಕಾನದ ಕಟದರು ಭತ್ತದ  ವಿಶೇಷ  ತಳಿಯಾದ #ಅತಿಕಾರೆ"ಯನ್ನು ತುಳುನಾಡಿಗೆ ತಂದು ಕೃಷಿ  ಮಾಡಿ ಸಾಧಿಸಿದನ್ನು ಸಂಕೇತಿಸುತ್ತದೆ. ಈ ಮೂಲಕ ಸಾಮಾಜಿಕ  ವ್ಯವಸ್ಥೆ ಯ ಮೇಲೆ ಕಾನದ ಕಟದರು ಸಾಧಿಸಿದ ವಿಜಯವನ್ನು  ಕರಂಗೋಲಿನ  ಮೂಲಕ  ಆದಿ ದ್ರಾವಿಡ ಸಮುದಾಯ ಮರು ಅಭಿನಯಿಸಿ ಪ್ರದರ್ಶಿಸುತ್ತಿದೆ ಎಂಬುದಾಗಿ  ಕಂಡು ಬರುತ್ತಿದೆ 

ಕರಂಗೋಲು ಕುಣಿತದ ಸಂದರ್ಭದಲ್ಲಿ ಇಬ್ಬರು  ಪಾತ್ರಧಾರಿಗಳು ತಲೆಗೆ #ಕಾಂಗ್ (ಕಪ್ಪು  ಬಟ್ಟೆಯ ಮುಂಡಾಸು) ಸುತ್ತಿಕೊಂಡು ಮೈಗೆ ಜೇಡಿ ಮಣ್ಣಿನಿಂದ ವರ್ತುಲಗಳನ್ನು ಬಿಡಿಸಿಕೊಂಡು ಎರಡು ಕೈಗಳಲ್ಲಿ  ನೆಕ್ಕಿ ಗಿಡದ ಸೊಪ್ಪಿನ ಸೂಡಿಗಳನ್ನು ಹಿಡಿದುಕೊಂಡು "ಪೊಲಿ...ಪೊಲಿ...ಪೊಲಿಯೇ ಪೊಲಿಯರ ಪೋ..." ಎಂದು ಸುಶ್ರಾವ್ಯವಾಗಿ  ಹಾಡುತ್ತಾ ಮನೆಗೆ ಪೊಲಿಯನ್ನು (ಸಮೃದ್ದಿಯನ್ನು) ತಂದಿದ್ದೇವೆ ಎಂದು ಘೋಷಿಸುತ್ತಾ ಕ್ರಮ ಬದ್ದವಾಗಿ ಮಣಿ ಗಂಟೆಯ ತಾಳಕ್ಕೆ  ಸರಿಯಾಗಿ  ಹೆಜ್ಜೆ  ಹಾಕುತ್ತ ಕುಣಿಯುತ್ತಾರೆ. ಪಕ್ಕದಲ್ಲಿ  ಮತೊಬ್ಬ ಪಾತ್ರಧಾರಿ ಕೈಯಲ್ಲಿ ಮಣಿ ಗಂಟೆಯೊಂದನ್ನು  ತಾಳ ಬದ್ದವಾಗಿ ಅಲ್ಲಾಡಿಸುತ್ತ  ಕರಂಗೋಲು ಪಾಡ್ದನವನ್ನು ಹಾಡುತ್ತಾನೆ. ಕುಣಿತ ಯಾವ ಮನೆಯಲ್ಲಿ ನಡೆಯುತ್ತಿದೆಯೋ ಆ ಮನೆಯವರು ಕುಣಿತ ಆರಂಭವಾಗುವ ಮೊದಲೇ ದೀಪವೊಂದನ್ನು ಅಂಗಳದಲ್ಲಿ  ತಂದಿರಿಸಬೇಕು. ಕುಣಿತದ ಕೊನೆಯಲ್ಲಿ  ಮನೆಗೆ ಪೊಲಿ, ಸಮೃಧ್ಧಿ ಅದೃಷ್ಟವನ್ನು ತಂದು ತುಂಬಿ ಅನಿಷ್ಟಗಳನ್ನು ನಿವಾರಿಸಿದ್ದೇವೆ " ಎಂದು ಕುಣಿತದ ಹಾಡುಗಾರ ಘೋಷಿಸುತ್ತಾನೆ.  ಮುಂದೆ ಕುಣಿತದ  ಇಬ್ಬರು  ಪಾತ್ರಧಾರಿಗಳು ಮನೆಯಲ್ಲಿನ  ಚಿಕ್ಕ  ಮಕ್ಕಳು  ಹಾಗೂ ಪ್ರಾಯಸ್ಥರ ಹಾಗೂ  ಮುದುಕರ ಮೈಯನ್ನು ತಾವು ಕೈಯಲ್ಲಿ ಹಿಡಿದ ನೆಕ್ಕಿಯ ಸೊಪ್ಪಿನ ಸೂಡಿಯಿಂದ ನಿವಾಳಿಸುತ್ತಾರೆ. ಇದು ಸೋಂಕನ್ನು,  ಅನಿಷ್ಟಗಳನ್ನು ನಿವಾರಿಸುವ ಕ್ರಮವೇ ಆಗಿರುತ್ತದೆ. ಆ ನಂತರ ಕರಂಗೋಲು ಕುಣಿತದ ತಂಡಕ್ಕೆ  ಆ ಮನೆಯವರು ಮುಖ್ಯವಾಗಿ ಭತ್ತ, ಅವಲಕ್ಕಿ, ತೆಂಗಿನಕಾಯಿ ಮತ್ತಿತರ  ಫಲವಸ್ತುಗಳನ್ನು ಬಲು ಭಕ್ತಿಯಿಂದ ಅರ್ಪಿಸುವ ಕ್ರಮ ಸಂಪ್ರದಾಯ ಇದೆ. ಇದರ ನಂತರ ಮುಂದಿನ ಮನೆಗೆ ಕರಂಗೋಲು ತಂಡ ಸಾಗುತ್ತದೆ. 

ಡಾ.ಕೆ.ಚಿನ್ನಪ್ಪ ಗೌಡರು #ಕರಂಗೋಲು ಕುಣಿತ : ಪಠ್ಯ, ಪ್ರದರ್ಶನ ಮತ್ತು ಅರ್ಥ" ಎಂಬ ಅಧ್ಯಯನದಲ್ಲಿ  ಕರಂಗೋಲು ಕುಣಿತದ ಹಾಡು (ಪಾಡ್ದನ) ಪ್ರದರ್ಶನ  ಮತ್ತು ಅದರ ಅರ್ಥ  ಮಹತ್ವಗಳನ್ನು ಬಿಚ್ಚಿಡುತ್ತಾರೆ. " ಬಹಳ ಬಾರಿ ಇಂತಹ ಕುಣಿತಗಳು ಒಳಗೊಂಡಿರುವ ಸಾಹಿತಿಕ ಭಾಗವಾದ ಹಾಡುಗಳನ್ನು , ವೇಷಧಾರಿಗಳು ಧರಿಸಿರುವ ವೇಷಭೂಷಣಗಳನ್ನ, ಅಲಂಕಾರ ಸಾಮಗ್ರಿಗಳನ್ನು  ಮತ್ತು ಕುಣಿತದ ಶೈಲಿಗಳನ್ನು  ಪರಸ್ಪರ  ಸಂಬಂಧವಿಲ್ಲದ  ಪ್ರತ್ಯೇಕ  ಪ್ರತ್ಯೇಕ  ಅವಯವಗಳೆಂದು ಪರಿಭಾವಿಸಿಕೊಂಡು ವರ್ಣಿಸುವ, ವಿವರಿಸುವ ಮತ್ತು ಅರ್ಥೈಸುವ ಪ್ರಯತ್ನಗಳು  ನಡೆದಿವೆ. ಈ ಪ್ರಯತ್ನಗಳ ಹಿಂದೆ ಮೆಚ್ಚುಗೆಯನ್ನು  ಧಾರಾಳವಾಗಿ ವ್ಯಕ್ತಪಡಿಸುವ ಪ್ರಶಂಸಾಪರ ಮನಸ್ಸೊಂದು ಕೆಲಸ ಮಾಡಿರುವುದು ಸುಲಭವಾಗಿ  ಕಂಡು ಬರುತ್ತದೆ. ಹೀಗಾಗಿ "ಸುಂದರವಾದ ಕುಣಿತ", ಮನಸೆಳೆಯುವ ವೇಷಭೂಷಣ, ಅನಿಷ್ಟವನ್ನು ತೊಡೆದು ಹಾಕುವ ಆಶಯ, ಉಳಿಸಿ ಬೆಳೆಸಬೇಕಾದ ಕಲೆ - ಎಂಬಂತಹ ಸರಳಾತ್ಮಕ, ನಿರ್ಧಾರಾತ್ಮಕ ಮತ್ತು ಘೋಷಣಾತ್ಮಕ ಹೇಳಿಕೆಗಳನ್ನು  ಕೊಡುತ್ತಿರುವುದು ಕಂಡು ಬರುತ್ತದೆ. ಕುಣಿತವೊಂದು ಸಂಕೀರ್ಣ  ರೂಪಕ ಅಭಿವ್ಯಕ್ತಿ  ಮಾಧ್ಯಮ  ಎಂದಾಗಲಿ,  ತುಳುನಾಡಿನ  ಜಾತ್ಯಾಧರಿತ ಸಮಾಜವೊಂದರ ಚಾರಿತ್ರಿಕ  ಉತ್ಪನ್ನವೆಂದಾಗಲಿ, ಬರಿಯ ಹಾಡು ಮಾತ್ರ  ಪಠ್ಯ  ಅಲ್ಲ  ಎಂದಾಗಲೀ, ಪಠ್ಯ  ಸಂದರ್ಭ ಪ್ರದರ್ಶನ  ಮತ್ತು ಅರ್ಥ  - ಇವುಗಳೊಳಗೆ ನಿಕಟವಾದ  ಸಂಬಂಧವಿದೆಯೆಂದಾಗಲಿ ಸರಿಯಾದ ತಿಳುವಳಿಕೆ  ಇಲ್ಲದಿರುವುದೇ ಈ ಬಗೆಯ ಸರಳ ತೀರ್ಮಾನಗಳಿಗೆ ಕಾರಣವಾಗಿದೆ" ( ಸಿರಿ; ಪುಟ,392)

ಈ ಹಿನ್ನೆಲೆಯಲ್ಲಿಯೇ ಕರಂಗೋಲು ಕುಣಿತದ ಬಗೆಗಿನ ವಿವಿಧ  ಲೇಖಕರ ತೀರ್ಮಾನಗಳನ್ನು, ಅರ್ಥೈಸುವಿಕೆಗಳನ್ನು ನಮ್ಮ  ಮುಂದೆ  ಡಾ. ಚಿನ್ನಪ್ಪ ಗೌಡರು ಇಡುತ್ತಾರೆ- "ಕ್ರಷಿ ಚಟುವಟಿಕೆಗೆ ಸಂಬಂಧಿಸಿದ  ಒಂದು ಹವ್ಯಾಸಿ  ಕಲೆ, ಇದಕ್ಕೆ  ಸ್ಪಷ್ಟವಾದ  ಅರ್ಥ ದೊರೆಯುದಿಲ್ಲವಾದರೂ ಕಲಾವಿದರು ಹಿಡಿಯುವ ಕೋಲು ಕರಿಯದಾದುದರಿಂದ ಈ ಅರ್ಥ  ಬಂದಿರಬಹುದೆನಿಸುತ್ತದೆ ಅಥವಾ ಕರದಲ್ಲಿ ಹಿಡಿಯುವ ಕೋಲು ಕರ್ಂಗೊಲು ಆಗಿರಬಹುದು, ಸುಗ್ಗಿಯ  ಕಾಲದಲ್ಲಿ ಕಲಾವಿದರು ವೇಷ ಹಾಕಿಕೊಂಡು ಮನೆ ಮನೆಗೆ ಬಿತ್ತನೆಯ ಬೀಜ ಸಂಗ್ರಹಿಸುತ್ತಾರೆ, ಅವರ ಮೈಮೇಲೆ ಅಲಂಕರಿಸಿಕೊಳ್ಳುವ ಸೊಪ್ಪು  ಸುಗ್ಗಿಯ  ಸಮ್ರದ್ಧಿಯ ಸಂಕೇತ, ಸವರಿಕೊಳ್ಳುವ ಕರಿಯ ಬಣ್ಣ  ತಮ್ಮ  ಬದುಕಿನ ಕತ್ತಲೆಯ  ಸ್ವರೂಪ, ಈ ಕುಣಿತವು ಮುಖ್ಯವಾಗಿ ಕ್ರಷಿಗೆ ಸಂಬಂಧಪಟ್ಟಿದ್ದಾಗಿದ್ದು ಕರಂಗೋಲು ಎಂಬುದು ಒಂದು ವಿಧದ  ವಿಶಿಷ್ಟ  ಧಾನ್ಯದ ತಳಿ ಎಂಬ ಅಭಿಪ್ರಾಯವು ಕರಂಗೋಲು ಪದಗಳಿಂದ ಹೊರಡುವಂತಿದೆ "( ಅದೇ; ಪುಟ, 392)

ಮುಂದುವರಿದು ಡಾ.ಚಿನ್ನಪ್ಪ ಗೌಡರು ಕರಂಗೋಲು ಕುಣಿತದ ವಿವರಗಳನ್ನು  ಬಲು ವಿಸ್ತಾರವಾಗಿ  ದಾಖಲಿಸುತ್ತಾರೆ. " ಆದಿ ದ್ರಾವಿಡ  ( ಶಬ್ದವನ್ನು  ಬದಲಾಯಿಸಲಾಗಿದೆ) ಜನಾಂಗಕ್ಕೆ  ಸೇರಿದ ಒಟ್ಟು ಐದು ಜನರು ಕರ್ಂಗೋಲು ತಂಡದಲ್ಲಿರುತ್ತಾರೆ. ಇಬ್ಬರು  ವೇಷ ಹಾಕಿ ಕುಣಿದರೆ ಮತ್ತಿಬ್ಬರು ಹಾಡು ಮತ್ತು ಗಂಟೆಯ ಸದ್ದಿನ ಹಿಮ್ಮೇಳನವನ್ನು ಒದಗಿಸುತ್ತಾರೆ. ಮನೆ ಮನೆಗೆ ಹೋಗಿ ಪ್ರದರ್ಶನ  ನೀಡಿದಾಗ ದೊರೆಯುವ ವಸ್ತು  ರೂಪದ ಸಂಭಾವನೆಯನ್ನು ಹೊತ್ತುಕೊಂಡು  ಬರಲು ಮತ್ತೊಬ್ಬನಿರುತ್ತಾನೆ. ಭತ್ತ  ಹೊರುವವನು ಎಂದೇ ಅವನನ್ನು  ಕರೆಯಲಾಗುತ್ತದೆ. ಕರ್ಂಗೋಲಿಗೆ ಕೂಲಿಯಾಗಿ ಭತ್ತ  ಕೊಡಬೇಕೆಂಬ ವಾಡಿಕೆಯಿದೆ.. ಸುಗ್ಗಿ  ಹುಣ್ಣಿಮೆಯ ಮುಂಚಿನ ದಿನ, ಸುಗ್ಗಿ  ಹುಣ್ಣಿಮೆ ಮತ್ತು  ಅದರ ಮರುದಿನ --ಹೀಗೆ ಮೂರು ದಿನ ಮಾತ್ರ  ಎರಡು ಮೂರು ಗ್ರಾಮಗಳೊಳಗೆ ಸಂಚರಿಸುತಾರೆ. ಇಬ್ಬರಿಗೆ ಬಣ್ಣ  ಹಾಕಿ ವೇಷ ಭೂಷಣ  ತೊಡಿಸುವ ಮೊದಲು ಆದಿ ದ್ರಾವಿಡ  (ಶಬ್ದವನ್ನು  ಬದಲಾಯಿಸಲಾಗಿದೆ ) ಜನಾಂಗದ ಆರಾಧ್ಯ  ದೈವಗಳಾಗಿರುವ 'ಕಾಣದ" ಮತ್ತು 'ಕಟದ' ಎಂಬಿಬ್ಬರಿಗೆ ಒಂದು ತಂಬಿಗೆ ನೀರಿಟ್ಟು ಕೈ ಮುಗಿಯುತ್ತಾರೆ. "ಮೂರು ದಿನದ ಆಟವನ್ನು  ಪ್ರದರ್ಶಿಸುವ  ವೇಳೆಗೆ  ಕೈ ಕಾಲಿಗೆ ಏನೂ ತೊಂದರೆಯಾಗದಂತೆ  ಕಾಪಾಡಿದರೆ ನಿಮಗೆ ಪೂಜೆಯನ್ನು  ಸಲ್ಲಿಸುತ್ತೇವೆ " ಎಂದು ಪ್ರಾರ್ಥನೆಯನ್ನು  ಸಲ್ಲಿಸುತ್ತಾರೆ. ಜೇಡಿ ಮಣ್ಣಿನ್ನು ಕಲಸಿ 'ಲೆಂಕಿರಿ ಓಟೆ' (ಬಿದಿರಿನ ಜಾತಿ)ಯ ಸಹಾಯದಿಂದ  ಕರ್ಂಗೋಲು ಕಟ್ಟಿದವರ ಮುಖ , ತೋಳು, ಎದೆ, ಬೆನ್ನು,  ಹೊಟ್ಟೆ  -ಹೀಗೆ ಮೈಮೆಲೇಲ್ಲಾ ಹತ್ತಿರ ಹತ್ತಿರ ವರ್ತುಲಗಳನ್ನು ಬಿಡಿಸುತ್ತಾರೆ. ಕಪ್ಪು  ಚರ್ಮದ ಮೇಲೆ ನಿಬಿಡವಾದ ಈ ವರ್ತುಲಗಳು ನೆಗೆದು ಕಾಣುತ್ತವೆ. ಇದೇ ಜೇಡಿ ಮಣ್ಣಿನಿಂದ  ಎದೆ, ಹೊಟ್ಟೆ, ಮತ್ತು ಬೆನ್ನಿನ ಮೇಲೆ ಬರುವಂತೆ ಸಮಾನಾಂತರದ ಅಗಲವಾದ ಎರಡು ಗೆರೆಗಳನ್ನು  ಎಳೆಯುತ್ತಾರೆ ಇದಕ್ಕೆ  "ಗೇಂಟಿ" ಎಳೆಯುವುದು ಎನ್ನುತ್ತಾರೆ . ತಲೆಗೆ ಬಿಳಿಯ ಮುಂಡಾಸು ಸುತ್ತುತಾರೆ. ಸೊಂಟದಿಂದ ಕೆಳಗೆ ಬಿಳಿಯ ವಸ್ತ್ರ, ಕೈ ಮತ್ತು ಕಾಲುಗಳಿಗೆ "ಜೇಡಿಯ ದಂಡೆ" ಹಾಕುತ್ತಾರೆ. ಇಬ್ಬರೂ  ಕೈಗಳಲ್ಲಿ  ನೆಕ್ಕಿ ಸೊಪ್ಪಿನ ಸೂಡಿಯನ್ನು ಹಿಡಿದುಕೊಳ್ಳುತ್ತಾರೆ. ಮತ್ತಿಬ್ಬರು ಮಾಮೂಲಿ  ಉಡುಪು, ತಲೆಗೆ ಮುಂಡಾಸು, ಬಲದ ಕೈಯಲ್ಲಿ  'ಗಂಟೆ'ಯನ್ನು  ಹಿಡಿದುಕೊಂಡಿರುತ್ತಾರೆ. ಗ್ರಾಮ ಸಂಚಾರದ ಅವಧಿಯಲ್ಲಿ  ತಂಡದ  ಸದಸ್ಯರು  'ಶುದ್ಧ'ದಲ್ಲಿರಬೇಕು. ಕರ್ಂಗೋಲು ಹಾಡಿನ ಮೊದಲು ಸೊಲ್ಲು ಹೇಳಿ " ಪೊಲಿ ಲೆತೊಂದು ಬತ್ತೋ " ( ಪೊಲಿಯನ್ನು ಕರೆದುಕೊಂಡು ಬಂದಿದ್ದೇವೆ) ಎಂದು ಗಟ್ಟಿಯಾಗಿ  ಹೇಳುತ್ತಾರೆ. ಆಗ ಮನೆಯವರು ಬಾಗಿಲು ತೆಗೆದು ದೀಪ ಉರಿಸಿ ಜಗಲಿಯಲ್ಲಿ ತಂದಿಡುತ್ತಾರೆ. 'ಕರ್ಂಗೋಲ್ ನಲಿಪುಲೆ' -- ಕರ್ಂಗೋಲು ಕುಣಿಯಿರಿ ಎಂದು ಮನೆಯವರು ಸೂಚನೆ ಕೊಟ್ಟ  ಮೇಲೆ ಇಬ್ಬರ ಹಾಡು ಮತ್ತು  ಮತ್ತಿಬ್ಬರ ಕುಣಿತ ಪ್ರಾರಂಭವಾಗುತ್ತದೆ. ಹಾಡಿನ ಪ್ರತಿ ಸೊಲ್ಲನ್ನು ಆವರ್ತನೆಯ ರೂಪದಲ್ಲಿ  ಹಾಡಲಾಗುತ್ತದೆ. ಹಾಡನ್ನು  ಪ್ರಾರಂಭಿಸುವ ಮೊದಲು ಮತ್ತು ಕೊನೆಗೊಮ್ಮೆ ಗಂಟೆಯ ಸದ್ದನ್ನು ಚೆನ್ನಾಗಿ  ಮಾಡುತ್ತಾರೆ. ಹಾಡುವ ಇಬ್ಬರು  ಅಂಗಳದ ಒಂದು ಬದಿಯಲ್ಲಿ  ನಿಲ್ಲುತ್ತಾರೆ. ಕರ್ಂಗೋಲು ಕುಣಿಯುವವರು ಹಾಡುವವರಿಗಿಂತ ಮುಂದೆ ಸಾಲಾಗಿ ನಿಂತು ಅಲ್ಲಿಂದ ಒಂದು ಹೆಜ್ಜೆಯನ್ನು  ಮುಂದಕ್ಕಿಟ್ಟು ಮತ್ತೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರಂತರವಾಗಿ  ಇದೇ ಶೈಲಿಯಲ್ಲಿ ಕುಣಿಯುತ್ತಾರೆ. ಮುಂದಕ್ಕೆ  ಹೋಗಿ ಹಿಂದಕ್ಕೆ  ಬರುವುದಷ್ಟೇ ಕುಣಿತ. ಮುಂದಕ್ಕೆ  ಹೆಜ್ಜೆಯಿಟ್ಟು ಮೊಣಕಾಲನ್ನು ತುಸು ಬಗ್ಗಿಸುವುದು, ಕೈಗಳಲ್ಲಿ  ಹಿಡಿದಿಡುವ  ನೆಕ್ಕಿ ಸೊಪ್ಪನ್ನು ಎತ್ತಿ  ತಮ್ಮ  ತಮ್ಮ  ತಲೆಯ  ಮೇಲಕ್ಕೆ  ಸವರುವಂತೆ ಹಾಕಿಕೊಳ್ಳುವುದು, ಕುಣಿತದ  ನಡುವೆ ಎರಡು ಮೂರು ಬಾರಿ ಜೊತೆಯಾಗಿ ಅಟ್ಟಹಾಸವನ್ನು ಕೊಟ್ಟು  ತಿರುಗಿ ದಿಕ್ಕನ್ನು  ಬದಲಾಯಿಸಿ ವಿರುದ್ಧ  ದಿಕ್ಕಿಗೆ  ಹೆಜ್ಜೆ  ಹಾಕಿ ಕುಣಿಯುವುದು --  ಇವಿಷ್ಟು ಕುಣಿತದಲ್ಲಿ ವಿವರಿಸಬಹುದಾದ ಅಂಶಗಳು. ಗಂಟೆಯ  ತಾಳ ಗತಿಗೆ ಸುಶ್ರಾವ್ಯವಾಗಿ  ಇಬ್ಬರು  ಹಾಡುತ್ತಾರೆ .  ಹಾಡಿನಲ್ಲಿ  ಅನೇಕ ಘಟನೆಗಳ ನಿರೂಪಣೆಯಿದ್ದರೆ ಕುಣಿತ ಮಾತ್ರ  ಒಂದೇ ರೀತಿಯಾಗಿರುತ್ತದೆ. ಕುಣಿತಕ್ಕೂ ಹಾಡಿಗೂ ವಸ್ತುವುನ್ನಾಗಲಿ ಭಾವಾಭಿನಯದಲ್ಲಾಗಲಿ ಯಾವುದೇ  ಸಂಬಂಧ ಸ್ಪಷ್ಟವಾಗುವುದಿಲ್ಲ. ಹಾಡು ಮುಕ್ತಾಯದಲ್ಲಿ ತಂಡದ  ಮುಖ್ಯಸ್ಥ  'ಪೊಲಿ ಲೆತೊಂದ್ ಬತ್ತ್ ಇಲ್ಲ್ ಇಂಜಾಯೋ " ( ಪೊಲಿ ಕರೆದುಕೊಂಡು  ಬಂದು ಮನೆ ತುಂಬಿಸಿದೆವು ) ಎಂದು ಹೇಳುತ್ತಾನೆ. ಒಂದು ರಾತ್ರಿಯ  ಸಂಚಾರ ಮುಗಿಸಿದ ಮೇಲೆ ಕರ್ಂಗೋಲು ತಂಡವು ಒಂದು ಕಾಸರಕನ ಬುಢದ ಬಳಿಗೆ ಬರುತ್ತದೆ. ಬಣ್ಣ  ತೆಗೆದು ವೇಷ ಕಳಚುವ ವಿಧಿಯು ಈ ಮರದ ಬುಡದಲ್ಲಿ  ನಡೆಯುತ್ತದೆ. ಬಣ್ಣ  ತೆಗೆದು ವೇಷ ಕಳಚಿ ಕಾಸರಕನ ಮರದಿಂದ  ಏಳು ಎಲೆಗಳನ್ನು  ಕಿತ್ತು ನೆಲದ ಮೇಲೆ ಸಾಲಾಗಿ ಇಟ್ಟು ಅದರಲ್ಲಿ  ಹಿಡಿ ಅಕ್ಕಿ ಹಾಕಿ ಕೈ ಮುಗಿಯಿತ್ತಾರೆ. ನೆಕ್ಕಿ ಸೊಪ್ಪಿನ ಸೂಡಿಯನ್ನು ಅದೇ ಮರದ ಬುಡದಲ್ಲಿಟ್ಟು ಹೋಗುತ್ತಾರೆ. (ಅದೇ, ಪುಟ; 397)

ಈ ಹಿನ್ನೆಲೆಯಲ್ಲಿ  ನಾವು ಕರಂಗೋಲು ಪಾಡ್ದನ  ಪಠ್ಯಗಳನ್ನು  ಗಂಭೀರವಾಗಿ  ವಿಶ್ಲೇಷಣೆಗಳಿಗೆ ಒಳಪಡಿಸಿದರೆ ಅದರ ಸಾಮಾಜಿಕ, ಧಾರ್ಮಿಕತೆ, ಐತಿಹಾಸಿಕ  ಹಾಗೂ ಜನಾಂಗೀಕ ನೆಲೆಗಳ ಅರ್ಥ  ಮತ್ತು ಮಹತ್ವಗಳು ನಮ್ಮ ಅರಿವಿಗೆ ಗೋಚರಿಸಬಹುದು. ಇಲ್ಲದಿದ್ದರೆ  ಬರೀ ಅದರ ಆಚರಣಾತ್ಮಕ ವಿಧಾನಗಳ ವಿವರಗಳಿಗೆ ತ್ರಪ್ತಿಪಟ್ಟುಕೊಳ್ಳಬಹುದು. ಡಾ.ವಾಮನ ನಂದಾವರರು, ಪಾಲ್ತಾಡಿ ರಾಮಕೃಷ್ಣ  ಆಚಾರ್ ಅವರು ಸಂಪಾದಿಸಿದ ಕರಂಗೋಲು ಹಾಡನ್ನು  ಉಲ್ಲೇಖಿಸುತ್ತಾರೆ. ಆ ಹಾಡು ಹೀಗೆ ಸಾಗುತ್ತದೆ;

#ಓ ಪೊಲಿಯೇ ಪೊಲ್ಯರೆ ಪೋ ಪುವ್ವೆ ಪೊಂಡುಲ್ಲಯ
ಓ ಮಾಯಿತ ಪುಣ್ಣಮೆ ಮಾಯಿಡೇ ಪೋತುಂಡೇ
ಓ ಸುಗ್ಗಿದ ಪುಣಮೆ ಸುಗ್ಗಿಢೇ ಪೋತುಂಡೇ
ಕರಂಗೋಲು ಪುಟ್ಟುನೇ ಕಡಲಾ ಬರಿಟ್ ಗೆ
ಕರಂಗೋಲು ಪುಟ್ಟುನೇ ಪೊಯ್ಯೆತ ನಡುಟೇ
ಪೊಯ್ಯೆತುಲಯ ಕುವ್ವೆತನೆ ನಡುಟೇ
ಕರಂಗೋಲು ಕೊಂಡ್ಪುನಾ ಕುಸಲೆನ್ ಪಿನಯೆರೆ
ಕೊಟ್ಟೆತಾ ಮುಳ್ಳುಟೋ ಕೂತೂತು ಕೊಂಡ್ರೊಡೆ
ಕರೆಯನೆ ಮಾದೇರಿಟಿ ಪೊದಿತೇ ಕೇಂಡ್ರೋಡೇ
ಕಂಚಿನೇ ತಡ್ಪೇಡ್ ಗಾಳ್ತದೇ ಕೊಂಡ್ರೊಡ್
ಉಳ್ಳಯನ್ ಮೆನ್ಪಿಯರ್ ಕುಸಲೆನ್ ಪಿನಯೆರೆ
ಗಿಂಡ್ಯಟೇ ಪೇರ್ ಪತ್ತ ಉಳ್ಳಯನ್ ಮೆನಿಪು
ಏರಜೇ ಕಾಂತಗಾ ಅಜ್ಜರೇನ್ ಮೆನಿಪು
ಅಜ್ಜರೆನ್ ಮೆನ್ಪಿಯೆರ ಕುಸಲ್ ನ ಪಿನಯನೆ
ಎರಜೇ ಕಾಂತಗಾ ಬಾಲೆನ್ ಮೆನಿಪು
ಬಾಲೆನ್ ಮೆನ್ಪಿಯರೆ ಕುಸಲ್ ನ ಎಯೆನ್
ಬಾಲೆದ ಕೈತಲ್ ಪುರ್ಗೊದೀದ್ ಬಾಲೆನ್ ಮೆನಿಪು
ಬಟ್ಟಲ್ಢ್ ಪೇರ್ ಪತ್ತ್ ಬಾಲೆನ್ ಮೆನಿಪು
ಉಳ್ಳಾಳ್ತಿನ ಮೆನ್ಪಿಯರೆ ಕುಸಲ್ ನ ಪಿನಯನೆ
ಗಿಂಡ್ಯಡ್ ನೀರ್ ಪತ್ತ್ ಉಳ್ಳಾಳ್ತಿನ್ ಮೆನಿಪು
ಎರೆಗೆ ಕಾಂತಗಾ ಉಳ್ಳಾಳ್ತಿನ್ ಮೆನಿಪು
ಉಳ್ಳಾಳ್ತಿನ ಮೆನಿಪಯರೆ ಕುಸಲ್ ನ ಪಿನಯನೆ
ಒರ್ಕರನೆ ಮೊಟ್ಟುಲೆಯೆ ಓರಂಗಡಿ ಓದಲೆ
ಓ ಪೊಲಿಯೇ ಪೊಲಿಯರೆ ಪೋ ಪೂವೆ ಪೊಂಡುಲ್ಲಾಯ
ಓ ಎರಗಾಲಂಗಾರ ನಾಲೆರು ಕಟ್ಟ್ ನಾ
ನಾಲೆರು ಕಟ್ಟರನೆ ನಾಯರಲಬ್ಯಾಂಡ್
*ಕಾಯೆರ್ತ ನಾಯೆರ ನನ ಬೇಕಾಲಾವೊಂದೆ
ಎರಗಾಲಂಗಾರ ನಾಲೆಯ ಮಾದಲಾ
ನಾಲೆರುಮಾದಯರೆ ನುಗೋನೆ ಇದ್ದಿಂಡೆ
ಪೆಲ ಕಡ್ತೆರುಳ್ಳಯ ನುಗೊಲೊಂಜಿ ತೀರುಂಡೆ
ಎರಗಾಲಂಗಾರಾ ನಾಲೆರು ಮಾದಲಾ
ನಾಲೆರು ಮಾದವರೆ ಪನೊರೊಂಬಿಲಾವೋ
ಪಾವೆರಿ ಪತ್ಯರುಳ್ಳಾಯ ಪನೊರೊಂಜಿ *ತೀರ್ತೆರೆ
ಏರಗಸಲಂಗಾರ ನಾಲೆರು ಮಾದಲಾ
ನಾಲೆರು ಮಾದಯರೆ ಪೊಸಕೆತ ಬಲ್ಲ್ದ್ಯಾಂಡೆ
ಕೇರಿನ್ ಪತ್ತ್ ದ್ ಪೊಸಕೆತ ಬಲ್ಲ್ ಮಲ್ತೆರೇ
ಏರಗಾಲಂಗಾರ ನಾಲೆರು ಮಾದಲಾ
ನಾಲೆರು ಮಾದವೆರೆ ಬಡೂನೆ ಆವೋಡೇ
ಬಡೂನೇ ಮಲ್ತೆರ್ ಪಿಲಿಯುಗುರು ಬಡೂನೇ
ಓಲಾಯರೇ ಕಂಡೊನು ಈಯರೆ ಕಂಡೋನು
ಕಾರಿ ಕಬಿಲನೆ ಎರು ರಡ್ಡ್ ಮಲ್ತೆರೇ
ಕೊಂಕಣಿ ಮಾಂಕಣಿ  ಕಂಡೋ ರಡ್ಡ್ ಮಲ್ತೆರ
ಲಾಯೆರೆ ಕಂಬುಲನೇ *ಒರ್ಲನೇ ಮಲ್ತ್ ರೇ
ಇರ್ವಲಟ ಅಡತಡ್ ಮೂವ್ವಲಟ್ ಕೋರುಂಡೆ
ಎರಗಾಲಂಗಾರ ನೀರ್ ನ ಕಟ್ಟಲಾ
ಓ ಪೊಲಿಯೆ ಪೊಲಿಯರೆ ಪೋ ಪುಲೆ ಪೊಂಡುಲ್ಲಾಯ

(ನೋಡಿ, ಹಾಡಿದವರು ಶ್ರೀಮತಿ ಮಿಣ್ಕೋ, ಪಾಲ್ತಾಡಿ(ಸಂಗ್ರಹ )ಪಿ.ರಾಮಕೃಷ್ಣ  ಆಚಾರ್, ಉಲ್ಲೇಖ; ಡಾ.ವಾಮನ ನಂದಾವರ, ಕರ್ನಾಟಕದ ಬುಡಕಟ್ಟುಗಳು, ಪುಟ; 675--676)

ತುಳು  ಭಾಷೆಯ ಸೊಗಡಿನಿಂದ ತುಂಬಿರುವ  ಹಾಗೂ ತುಂಬಾ  ಅರ್ಥಪೂರ್ಣ  ನಿಗೂಢತೆಗಳನ್ನು ಒಡಲಲ್ಲಿರಿಸಿಕೊಂಡಿರುವ ಕರಂಗೋಲು ಹಾಡನ್ನು  ಕನ್ನಡದ ಓದುಗರಿಗೂ ಅರ್ಥವಾಗಲಿ ಮತ್ತು ತೌಲನಿಕ  ಅಧ್ಯಯನದ ಹಿನ್ನೆಲೆಯಲ್ಲಿ  ಅದನ್ನು  ಇಲ್ಲಿ  ದಾಖಲಿಸುವುದು ಸೂಕ್ತ ಎಂಬುದಾಗಿ ತೋರುತ್ತದೆ.  ಕರಂಗೋಲು ಹಾಡಿನ ಕನ್ನಡ ರೂಪವನ್ನು  ಡಾ.ಕೆ. ಚಿನ್ನಪ್ಪ ಗೌಡರು ಸಂಪಾದಿಸಿದ್ದಾರೆ. ಅದು ಹೀಗಿದೆ :

'ಪೊಲಿ ಪೊಲಿ' ಎಂದು ಕರೆವೆವು ಕರ್ಂಗೋಲ ಹುಟ್ಟಿದ 
ಕರಂಗೋಲು ಹುಟ್ಟಿದ್ದು  ಎಲ್ಲಿ ಕಾಂತಕ್ಕ
ಮೂಡುದಿಕ್ಕಿನಲ್ಲಿ ಗದ್ದೆಯ ಗಡಿಯಲ್ಲಿ 
ಪಡುದಿಕ್ಕಿನಲ್ಲಿ ಹೊಳೆಬದಿ ನಡುವಿನಲ್ಲಿ
ಎಲ್ಲಿ ಕಾಂತಕ್ಕ ಏಳು ಕಡಲು ಆ ಬದಿಯಲ್ಲಿ 
'ಮಾದೆರು'ವಿನ ದೊಡ್ಡ  ಕಾಡು ತಿರುಗಿಸಿ ತರಬೇಕು
'ಕೊಟ್ಟೆ'ಯ ಮುಳ್ಳಿಯಲ್ಲಿ ಸಿಕ್ಕಿಸಿ ತರಬೇಕು
'ಸೂರಿ'ಯ ಮುಳ್ಳಿನಲ್ಲಿ ಹೆಣೆದು ತರಬೇಕು
'ಈಂಬುಳ' ಮುಳ್ಳಿನಲ್ಲಿ ತಿರುಗಿಸಿ ತರಬೇಕು
'ಇಟ್ಟೆಯದ' ಸೊಪ್ಪಿನಲ್ಲಿ ಹೊದ್ದಿಸಿ ತರಬೇಕು
'ಬೈದ್ಯರ' ಕೋವಿಯಲ್ಲಿ ಗುಂಡು ಹಾರಿಸಿ ತರಬೇಕು
ಕೈಯ ಬಿಲ್ಲಿನಲ್ಲಿ ಸಿಕ್ಕಿಸಿ ತರಬೇಕು
ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು
ಗೆರಟೆಯ ನೀರಿನಲ್ಲಿ  ಮುಳುಗಿಸಿ ತರಬೇಕು
ಮರದ ಪಾತ್ರೆಯ ನೀರಿನಲ್ಲಿ  ಈಜಿಸಿ ತರಬೇಕು
ಆ ಕರ್ಂಗೋಲು ತರಲು ಯಾರು ಬಲ್ಲರು ?
ಮಂಗಾರ ಮಾನಿಗ ಅವಳಾದರೆ ಬಲ್ಲಳು
ಕಾಂತಾರ ಕರಿಯ ಕುರೋವು ಅವನಾದರೆ ಬಲ್ಲನು
'ಕಟ್ಟಿದ' ಮಕ್ಕಳು ಅವರಾದರೆ ಬಲ್ಲರು
ಯಾರು ಮದುಮಗಳೆ (ಹೆಂಗಸು) ಬಾಗಿಲು ತೆಗೆಯಿರಿ
ಬಾಗಿಲು ತೆಗೆಯುವ ಉಪಾಯವನ್ನು ತಿಳಿಯೇನು
ಬೀಗದ ಕೈ ಹಿಡಿದು ಚಿಲಕವನ್ನು ಜಾರಿಸಿರಿ
ಯಾರು ಒಡತಿಯೆ ಒಡೆಯನನ್ನು ಎಚ್ಚರಿಸಿರಿ
ಒಡೆಯನನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಗಿಂಡ್ಯೆ ನೀರು ಕೊಂಡು ಹೋಗಿ ಒಡೆಯನನ್ನು ಎಚ್ಚರಿಸಿರಿ
ಯಾರು ಒಡತಿಯೆ ಮಗುವನ್ನು  ಎಚ್ಚರಿಸಿರಿ
ಮಗುವನ್ನು  ಎಚ್ಚರಿಸುವ ಉಪಾಯವನ್ನು ತಿಳಿಯೆನು
ಬಟ್ಟಲು ಹಾಲು ಕೊಂಡು ಹೋಗಿ ಮಗುವನ್ನು  ಎಬ್ಬಸಿರಿ
ಒಡೆಯ ಇದ್ದಾರೊ ಇಲ್ಲವೋ ದೇಯಿ ಮದುಮಗಳೇ
ಕರೆದರೆ ಕೂಗಿದರೆ 'ಕೂಟಕ್ಕೆ' ಹೋದರು
ಕೂಟದಲ್ಲಿ ಒಡೆಯ ಏನು ಮಾಡಿದರು ?
ಹಂಡೆ ಕೊಂಡು ಹೋಗಿ (ಹಾಲು) ಕರೆಯಲು ಎಮ್ಮೆ ತಂದರು
ಗಿಂಡ್ಯೆ ಕೊಂಡು ಹೋಗಿ ಹಾಲು ಕರೆಯಲು ದನ ತಂದರು
ಕಾರಿ ಕಬಿಲ ಎಂಬ ಎತ್ತುಗಳನ್ನು ತಂದರು
*ಕಾಣದ ಕಟದ ಎಂಬ ಆಳುಗಳನ್ನು ನೇಮಿಸಿದರು
*ಕೊಂಕಣ' 'ಬಂಕಣ' ಎಂಬ ಗದ್ದೆ ಮಾಡಿದರು
ಕಟ್ಟೆ ಹುಣಿಯ ಮೇಲೆ ತೆಂಗು ನೆಡಿಸಿದರು
ಬಳ್ಳಿಗೆ ಮೇಲಾದ ಬಾಳೆ ಬೆಳೆಸಿದರು
ಬೆಟ್ಟಿನಲ್ಲಿ ಮೇಲಾದ ಹಲಸು ಬೆಳೆಸಿದರು
ಕಾಡಿಗೆ ಮೇಲಾದ 'ಶಾಂತಿ' ಮರ ಬೆಳೆಸಿದರು
ಪಡು 'ಪದೋಳಿ'ಯಲ್ಲಿ ಕಂಚಿಯ ಗಂಟೆ ಜೊಡಿಸಲು
ಕಂಚಿಯ ಗಂಟೆ ಜೋಡಿಸಲು 'ನಾಲಗೆ' ತುಂಡಾಯಿತು
ಮೂಡು 'ಪದೊಳಿ' ಮುತ್ತಿನ ಗಂಟೆ ಜೊಡಿಸಲು
ಮುತ್ತಿನ  ಗಂಟೆ ಜೋಡಿಸಲು ಮುರಿದು ಹೋಯಿತು
ನಾಲ್ಕೆತ್ತು ತಿರುಗಿಸಲು ಕಾಣದ ಕಟದ
ನಾಲ್ಕೆತ್ತು ತಿರುಗಿಸಲು (ಹೂಡಲು) ನೇಗಿಲು ಇರಲಿಲ್ಲ 
ಕಾಸರಕನ ಮರ ಕಡಿದು ನೇಗಿಲು ಮಾಡಿಸಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ನಾಲ್ಕೆತ್ತು ಹೂಡಲು ನೊಗ ಇರಲಿಲ್ಲ 
ಹಲಸಿನ ಮರಕಡಿದು ನೊಗವೊಂದು ಕೆತ್ತಿಸಬೇಕು
ನಾಲ್ಕೆತ್ತು ಹೂಡಲು 'ಗುಂಡಲ'  ಇರಲಿಲ್ಲ 
'ಪಾವೊರಿ'ಯನ್ನು  ಹಿಡಿದು 'ಗುಂಡಲ' ಹಾಕಬೇಕು
ನಾಲ್ಜೆತ್ತು ಹೂಡಲು ಕೊರಳ ಹಗ್ಗ ಇರಲಿಲ್ಲ 
ಕೇರೆಯನ್ನು ಹಿಡಿದು ಕೊರಳ ಹಗ್ಗ ತೊಡಿಸಬೇಕು
ನಾಲ್ಕೆತ್ತು ಹೂಡಲು ಕೋಂಟು ಹಗ್ಗ ಇರಲಿಲ್ಲ 
ಸರ್ಪವನ್ನು ಹಿಡಿದು ಕೋಂಟು ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಕಟ್ಟುವ ಹಗ್ಗ ಇರಲಿಲ್ಲ 
ಒಳ್ಳೆ ಹಾವನ್ನು  ಹಿಡಿದು ಕಟ್ಟುವ ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಬೆತ್ತವೂ ಇರಲಿಲ್ಲ 
ಬುಳೆಕ್ಕರಿ ಹಾವನ್ನು  ಹಿಡಿದು ಪೀಲಿ ಬೆತ್ತ ನೆಯ್ಯಬೇಕು
ನಾಲ್ಕೆತ್ತು ಹೂಡಲು ಪಣೊರು ಇರಲಿಲ್ಲ 
ಅರಣೆಯನ್ನು ಹಿಡಿದು ಪಣೊರು ಬಡಿಯಬೇಕು
ನಾಲ್ಕೆರು ಹೂಡಲು ಪತ್ತೊಂಜಾನಿ ಇರಲಿಲ್ಲ 
ಉಂಬುಳು ಹಿಡಿದು  ಸಣ್ಣ  ಮೊಳೆ ಹೊಡೆಯಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ಪಡುದಿಕ್ಕಿಗೊಮ್ಮೆ ಹೂಡು ಕಾನದ ಕಾಟದ
ಮೂಡುದಿಕ್ಕಿಗೊಮ್ಮೆ ಹೂಡು ಕಾಣದ ಕಾಟದ
ಎರಡು ಸಾಲು ಹೂಡಿಸಿದ ಕಿನ್ನಿ ಮಾನಿ ಒಡೆಯ
ಎರಡನೆಯ ಸಾಲಿಗೆ ಹಟ್ಟಿಗೊಬ್ಬರ ಹಾಕಿಸಿದರ ಒಡೆಯ
ಐದು ಸಾಲು ಹೂಡಿಸಿದ ನಾರಾಯಣ ಬ್ರಾಹ್ಮಣ 
ಐದು ಸಾಲಿಗೆ ಆಢಿ ಗೊಬ್ಬರ  ಹಾಕಿಸಿದರು ಒಡೆಯ
ಮೂಡಣಕ್ಕೆ ಹೋಗಬೇಕು ಬಿಳಿ 'ಕಯಮೆ' ತರಬೇಕು
ಪಡುವಣಕ್ಕೆ ಹೋಗಬೇಕು ಕಪ್ಪು 'ಕಯಮೆ' ತರಬೇಕು
ಒಂದು ಗದ್ದೆಗೆ ಒಂದು ತಳಿ ಬಿತ್ತಬೇಕು
ಮತೋಂದು ಗದ್ದೆಗೆ ಮತ್ತೊಂದು  ತಳಿ ಬಿತ್ತಬೇಕು
ಮೂರರಲ್ಲಿ ಮೂರನೆಯ ನೀರು ಇಳಿಸಿದ್ದಾರೆ ಒಡೆಯ
ಏಳರಲ್ಲಿ ಏಳನೇ ನೀರು ನಿಲ್ಲಿಸಿದ್ದಾರೆ ಒಡೆಯ
ಅದೊಂದು ಮೊಳಕೆಯಾಯಿತು ಸೂಜಿ ಮೊಳಕೆಯಾಯ್ತು
ಅದೊಂದು ಚಿಗುರಿತು ಹಿಂಗಾರ ಮಾಲೆ ಚಿಗುರಿತು
ಭತ್ತ  ಹಣ್ಣಾಯಿತು ಹಳದಿ ವರ್ಣವಾಯಿತು
ಪೈರು ಹಣ್ಣಾಯಿತು ಕೇದಗೆ ವರ್ಣವಾಯಿತು
ನಿಂತು ಬೆಳೆಯಲು ಗಿಳಿಯಣ್ಣ ಬಿಡಲಿಲ್ಲ 
ಗಿಳಿಯಣ್ಣ ನನ್ನು ಹಿಡಿದು ಪಂಜರದಲ್ಲಿ ಹಾಕಬೇಕು
ಪಂಜರದಲ್ಲಿ ಗಿಳಿಯಣ್ಣ ಓದಿದಂತೆ ಕೇಳಿಸುತ್ತದೆ
ನೆಲ ಹಿಡಿದು ಬೆಳೆಯಲು ಹಂದಿಯಣ್ಣ ಬಿಡಲಿಲ್ಲ 
ಹಂದಿಯಣ್ಣ ನನ್ನು ಹಿಡಿದು ಗೂಡಿನಲ್ಲಿ  ಹಾಕಬೇಕು
ಗೂಡಿನಲ್ಲಿ  ಹಂದಿಯಣ್ಣ ಜಿಗಿದಂತೆ ಆಗುತ್ತದೆ 
ಕೆಯ್ ಕೊಯ್ಯಲು 'ಪರುಕತ್ತಿ' ತರಬೇಕು
ಕೆಯ್ ಕಟ್ಟಲು 'ಸೋಣಬಳ್ಳಿ' ತರಬೇಕು
ಕೆಯ್ ಹೊರಬೇಕು ಅಂಗಳಕ್ಕೆ ತರಬೇಕು
ಕೆಯ್ ಹೊಡೆಯಲು ಕಲ್ಲಿನ ಮಂಚ ತರಬೇಕು
ಕುಂಟು ಪೊರಕೆಯಲ್ಲಿ ಗುಡಿಸಿ ತರಬೇಕು
ಗಾಳಿಸುವ ಗೆರಸೆಯಲ್ಲಿ ಗಾಳಿಸಿ ತರಬೇಕು
ರಾಶಿ ಮಾಡಿದ ಭತ್ತ  ಮಾಳಿಗೆ ಮನೆ ಇರಬೇಕು
ಮಾಯಿ ತಿಂಗಳಲ್ಲಿ  ಭತ್ತ  ತೋಡಿಸಿದ್ದಾರೆ ಒಡೆಯ
ಕರ್ಂಗೋಲಿನ ಮಕ್ಕಳಿಗೆ ಗೆರಸೆ ತುಂಬಿಕೊಡಬೇಕು
ಒಡೆಯ ಒಡತಿ ಗುಣುಗುಣು ಹೇಳುತ್ತಾರೆ 
ಐವರಿಗೆ ಐದು ಪಡಿ ಬೇರೆಯೇ ಆಳೆಯಿರಿ
ಐವರಿಗೆ ಐದು ವೀಳ್ಯ ಬೇರೆಯೇ ಹಿಡಿಯಿರಿ
ಹಾಗೆ ಹೇಳುವುದಾದರೆ  ಮುಂಜಾನೆಯವರೆಗಿದೆ.
(#ಟಿಪ್ಪಣಿಯಲ್ಲಿ ಹಾಡು, ಕುಣಿತ ಮತ್ತು ಸಂಪ್ರದಾಯಗಳ ಮಾಹಿತಿಗಳನ್ನು  #ಬೆಳ್ತಂಗಡಿ  ತಾಲ್ಲೂಕಿನ  #ಉಜಿರೆ ಗ್ರಾಮದ #ಪೆರ್ಲ  ಎಂಬ ಸ್ಥಳದಲ್ಲಿ  ವಾಸಿಸುವ  ಆದಿ ದ್ರಾವಿಡ  ಜನಾಂಗದವರಿಂದ ಸಂಗ್ರಹಿಸಿಲಾಗಿದೆ ಎಂಬುದಾಗಿ ಡಾ.ಚಿನ್ನಪ್ಪ ಗೌಡರು ದಾಖಲಿಸಿದ್ದಾರೆ -ವರ್ಷಗಳು 1985, 1986, 1987)

#ಕರಂಗೋಲು ಪೂಜೆಯ ವಿನ್ಯಾಸ:

#ಕರಂಗೋಲು ಯಾತ್ರೆ" ಅಥವಾ ಕುಣಿತ ಮುಗಿದು ಒಂದೆರಡು ದಿನಗಳ  ನಂತರ  ಪೂಜೆಯನ್ನು  ನಡೆಸಲಾಗುತ್ತದೆ. ಕಾಸರಕನ ಮರದ ಬುಡದಲ್ಲಿ ಎಡೆಯನ್ನು ಬಡಿಸಿ ಕಾನದ ಕಟದರನ್ನು  ಕರಂಗೋಲು ಯಾತ್ರೆಯು ಸುಗಮವಾಗಿ ನಡೆಯಲು ಅಭಯ ಆಶೀರ್ವಾದ  ಮಾಡಿದಕ್ಕಾಗಿ ಕೈ ಮುಗಿದು ಪ್ರಾರ್ಥನೆ  ಸಲ್ಲಿಸಲಾಗುತ್ತದೆ. ಅವಲಕ್ಕಿ, ಬೆಲ್ಲ, ಬಾಳೆಹಣ್ಣು, ಶೇಂದಿ ಮತ್ತು ಕೋಳಿ ಪಧಾರ್ಥದ ಎಢೆಗಳನ್ನು ಬಡಿಸಲಾಗುತ್ತದೆ .ಕೊನೆಗೆ ಇದೇ ಎಡೆಗಳನ್ನು ಒಟ್ಟು ಮಾಡಿ ಪ್ರಸಾದದ ರೂಪದಲ್ಲಿ  ಪೂಜೆಗೆ ಬಂದವರಿಗೆ ಹಂಚಲಾಗುತ್ತದೆ. ಈ ಮೂಲಕ ಆ ವರ್ಷದ ಕರಂಗೋಲು ಕುಣಿತ, ತಿರುಗಾಟ, ಆರಾಧನೆ , ಪೂಜೆಯ ಪ್ರಕ್ರಿಯೆಗಳು ಮುಗಿಯುತ್ತವೆ. ಈ ಮೂಲಕ ಇಡೀ ಕರಂಗೋಲು ಕುಣಿತ ಲೌಕಿಕ ನೆಲೆಯಿಂದ  ಅಲೌಕಿಕ  ನೆಲೆಗೆ ಹಬ್ಬಿ ಜಾತಿ /ಸಮುದಾಯದ  ಪರಿಧಿಯನ್ನು ಮೀರಿ ಒಂದು #ಸೆಕ್ಯುಲರ್ ಮತ್ತು ಧಾರ್ಮಿಕತೆ  ನೆಲೆ"ಯನ್ನು  ನಿರ್ಮಿಸಿ  ನಾಡಿನ ಎಲ್ಲಾ  ಜಾತಿ ಸಮುದಾಯದವರಿಗೆ ಸಮೃಧ್ದಿ, ಅದೃಷ್ಟ, ಮಂಗಳಕರ, ಭದ್ರತೆ  ಹಾಗೂ  ಆರೋಗ್ಯದ  ಭಾವನೆಯನ್ನು ಕಟ್ಟಿಕೊಡುವ ,ಖಾತರಿಪಡಿಸುವ #ಸಮಾಜೋ--ಮಾನಸಿಕ ಕೆಲಸವನ್ನು  ಅದು ಯಶಸ್ವಿಯಾಗಿ  ನಿರ್ವಹಿಸುತ್ತದೆ . ಹೀಗೆ ಲೌಕಿಕ  ನೆಲೆಯಿಂದ  ಅಲೌಕಿಕ  ನೆಲೆಗೆ ವಿಸ್ತರಿಸಿಕೊಳ್ಳುವ ಕರಂಗೋಲು ಕುಣಿತದ  ವಿವಿಧ  ಆಯಾಮಗಳನ್ನು  ಹೀಗೆ ಡಾ.ಚಿನ್ನಪ್ಪ ಗೌಡರು ಕ್ರೋಡಿಕರಿಸುತ್ತಾರೆ ;
1. ಅಲೌಕಿಕ ವೀರರ ಆರಾಧನೆಯ ಪರಿಕಲ್ಪನೆಯನ್ನು  ಪಡೆದುಕೊಂಡಿದೆ

2. ಅನಿಷ್ಥವನ್ನು ತೊಡೆದುಹಾಕುವ ಮಾಂತ್ರಿಕತೆಯ ಶಕ್ತಿ  ಇಲ್ಲಿಯ ಯೋಧರಿಗೆ ಇದೆ ಎಂಬ ನಂಬಿಕೆಯು ಕುಣಿತದ ರೀತಿ ಮತ್ತು ಸಂಪ್ರದಾಯದಿಂದ ಸ್ಪಷ್ಟವಾಗುತ್ತದೆ 

3.ವಾರ್ಷಿಕವಾಗಿ  ಆವರ್ತನೆಗೊಳ್ಳುವ ಈ ಕರ್ಂಗೋಲು ಕುಣಿತವು  ಜಾತ್ಯಧಾರಿತ ಮತ್ತು ಶ್ರೇಣಿಕೃತ ಮತ್ತು  ಸಾಮಾಜಿಕ ವ್ಯವಸ್ಥೆಯ ಚಾರಿತ್ರಿಕ  ಉತ್ಪನ್ನವಾಗಿದೆ ಮತ್ತು ಆ ವ್ಯವಸ್ಥೆಯಲ್ಲಿ  ತನ್ನ  ಅರ್ಥ  ಮತ್ತು ಸಾರ್ಥಕ್ಯವನ್ನು ಕಂಡುಕೊಳ್ಳುವ ಕ್ರಿಯೆಯಾಗಿದೆ 

4. ತಮ್ಮ  ಜನಾಂಗದ ಸಾಂಸ್ಕೃತಿಕ  ವೀರರ 'ವ್ಯಕ್ತಿತ್ವ'ಗಳನ್ನು  ಕಲಾತ್ಮಕವಾಗಿ  ಪ್ರತಿನಿಧಿಸಿ, ಸಂಘರ್ಷ, ಕೊಲೆ, ಶೋಷಣೆ, ಬಡತನಗಳನ್ನು ಉದಾತ್ತೀಕರಿಸುವ ಆದಿ ದ್ರಾವಿಡ (ಶಬ್ದವನ್ನು  ಬದಲಾಯಿಸಲಾಗಿದೆ) ಜನಾಂಗದ ಆಲೋಚನೆಗಳನ್ನು  ಇಲ್ಲಿ ಕಾಣಬಹುದು

5. ತುಳುನಾಡಿನ  ಜನಾಂಗಗಳ ಅಧ್ಯಯನ  ಮತ್ತು  ಇತಿಹಾಸದಲ್ಲಿ  ಪ್ರಮುಖ  ಆಕರವಾಗಿ ಬಳಸಿಕೊಳ್ಳಬಹುದು

6. ಹಾಡಿನ ಸಾಂಪ್ರದಾಯಿಕ  ರಮ್ಯ  ಕಥನಗುಣ, ಕುಣಿತ , ವೇಷ ಭೂಷಣ  ಮತ್ತು ಸಂಪ್ರದಾಯಗಳ ಅರ್ಥಗಳು ಅಲೌಕಿಕತೆಯ ಪರಿಕಲ್ಪನೆಯನ್ನು  ಸ್ಪಷ್ಟಪಡಿಸುತ್ತದೆ  ( ಡಾ. ಕೆ.ಚಿನ್ನಪ್ಪ ಗೌಡ; ಸಿರಿ, ಪುಟ; 400)

#ಕರಂಗೋಲು ಕುಣಿತದ ಸಾಮಾಜಿಕ, ಧಾರ್ಮಿಕ  ಹಾಗೂ ಮಾಂತ್ರಿಕ  ನೆಲೆಗಳು :

ಕರಂಗೋಲು ಪಾಡ್ದನಗಳು ಅಥವಾ  ಪ್ರದರ್ಶನಗಳು ವ್ಯಕ್ತಪಡಿಸುವ ಅರ್ಥಗಳಿಗೆ ಮಾತ್ರ  ಕರಂಗೋಲು ಸೀಮಿತವಾಗಿಲ್ಲ. ಪಾಡ್ದನ, ಪ್ರದರ್ಶನಗಳನ್ನು  ಮೀರಿ ಅದರ ಅರ್ಥ ಮತ್ತು  ಮಹತ್ವಗಳು ವ್ಯಾಪಿಸಿವೆ ಎಂಬಂತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ  ಒಟ್ಟು  ಕಾನದ ಕಟದರ ಜೀವನ ವಿವರಗಳು, ಆದಿ ದ್ರಾವಿಡ ಜನಾಂಗದ ಸಾಮಾಜಿಕ  ಬದುಕು, ಆ ಜನಾಂಗದ ಸಾಂಸ್ಕೃತಿಕ  ಹಾಗೂ ಆರ್ಥಿಕ  ಸಂಬಂಧಗಳು, ಊಳಿಗಮಾನ್ಯ  ವ್ಯವಸ್ಥೆ  ಮತ್ತು  ಅದರ ಜೊತೆಗಿನ ಸಂಘರ್ಷ  ಮತ್ತು ತುಳುನಾಡಿನ  ಒಟ್ಟು ಸಾಂಸ್ಕೃತಿಕ  ಬದುಕಿನಲ್ಲಿ  ಸಂಧಿ ಪಾಡ್ದನಗಳಂತಹ ಮೌಕಿಕ ಸಾಹಿತ್ಯಗಳು ಇತ್ಯಾದಿಗಳನ್ನು   ಒಟ್ಟಾರೆಯಾಗಿ ನಾನು 'ಕರಂಗೋಲಿನ ಪಠ್ಯ' ಅಂತ ಕರೆಯಲಿಚ್ಚಿಸುತ್ತೇನೆ- ಇವೆಲ್ಲವೂ  ಅಖಂಡವಾಗಿ "ಕರಂಗೋಲು ಪರಂಪರೆಯ" ಅರ್ಥವನ್ನು  ನಿರ್ವಹಿಸುತ್ತಿವೆ. ಈ ನೆಲೆಯಲ್ಲಿ  ಕರಂಗೋಲಿನ ಬಹು ಆಯಾಮಗಳನ್ನು, ಅರ್ಥಗಳನ್ನು  ಲೌಕಿಕ  ಮತ್ತು ಅಲೌಕಿಕ  ಎರಡು ನೆಲೆಗಳಲ್ಲಿಯೂ ಅರ್ಥೈಸಿಕೊಳ್ಳಬೇಕಾಗಿದೆ. ಈ ಆರ್ಥೈಸಿಕೊಳ್ಳುವ ಪ್ರಕ್ರಿಯೆ ಸಂಕೀರ್ಣವಾಗಿದ್ದು  #ಸಮಾಜೋ -ಧಾರ್ಮಿಕತೆಯ (socio --spiritual)  ಶಿಸ್ತನ್ನು  ಅದು ನಮ್ಮಿಂದ  ನಿರೀಕ್ಷಿಸುವಂತೆ ಗೋಚರವಾಗುತ್ತದೆ.

1. ಕರಿಯ ಕೋಲು>ಕರಿಯಂಗಾಳು>ಕರಂಗೋಲು : ಕರಂಗೋಲು ಅಂದರೆ ಕರಿಯ ಬಣ್ಣದ  ಕೋಲು, ಕರದಲ್ಲಿ ಹಿಡಿದುಕೊಳ್ಳುವ ಕೋಲು ಎಂದೆಲ್ಲಾ  ಅರ್ಥೈಸಲಾಗಿದೆ. ಕರಂಗೋಲಿಗೆ ಈ ಎಲ್ಲಾ  ಅರ್ಥಗಳು ಇರುವಂತಿದೆ. ಈ "ಕರಿಯ ಕೋಲು" ಎರಡು ವಿಚಾರಗಳನ್ನು  ಸೂಚಿಸುತ್ತದೆ---a) ಕರದಲ್ಲಿ ಹಿಡಿದುಕೊಳ್ಳುವ ಕೋಲು; ಅದು ಒಂದು #ಅಲುಂಬುಡದ ಕೋಲು ಮತ್ತೊಂದು  #ಕರಿಯ ನೆಕ್ಕಿಯ ಕೋಲು  ಕೂಡಾ ಆಗಿರಬಹುದು ( ಮಾಹಿತಿ:  ಮೋನಪ್ಪ ನೀರಾಡಿ,  ಆದಿ ದ್ರಾವಿಡ, ಕಣಿಯೂರು, ಬೇಬಿ ಸುವರ್ಣ, ಅಧ್ಯಕ್ಷರು  ಮಾಲಾಡಿ ಗ್ರಾಮ ಪಂಚಾಯತ್, ಬೆಳ್ತಂಗಡಿ  ತಾಲ್ಲೂಕು) ಕರಂಗೋಲು ಪಾತ್ರಧಾರಿಗಳು ಕರಿಯ ನೆಕ್ಕಿಯ ಸೊಪ್ಪಿನ ಸೂಡಿ ಹಿಡಿದುಕೊಂಡು ಕುಣಿತವನ್ನು  ಮಾಡುತ್ತಾರೆ.ಕೊನೆಗೆ ಮಕ್ಕಳು ಮತ್ತು ಇತರ ಜನರ ಮೈಮೇಲೆ ನೆಕ್ಕಿಯ ಸೊಪ್ಪುನ್ನು ಬೀಸಿ ನಿವಾಳಿಸಲಾಗುತ್ತದೆ.ಇದು ಸೋಂಕು ಅಥವಾ  ಅನಿಷ್ಟಗಳನ್ನು ನಿವಾಳಿಸುವ ಕ್ರಮವೇ ಆಗಿರುತ್ತದೆ. ಬೇಬಿ ಸುವರ್ಣರು ತಿಳಿಸಿದಾಗೆ  ಚಿಕ್ಕ  ಮಕ್ಕಳಿಗೆ ಕೊಡುವ "ಚಿನ್ಹೆ"ಯ ಮತ್ತು "ಸೋಂಕಿನ" ಮಾತ್ರೆ"ಗಳನ್ನು  ಕರಿಯ ನೆಕ್ಕಿಯ ಸೊಪ್ಪಿನಿಂದಲೇ ತಯಾರಿಸಲಾಗುತ್ತದೆ. ಈ ನೆಲೆಯಲ್ಲಿ  ಕರಿಯ ನೆಕ್ಕಿ ತುಂಬಾ ಔಷಧೀಯ ಗುಣಗಳನ್ನು  ಹೊಂದಿದ್ದು ಜನಪದ ಮತ್ರು ಆಯುರ್ವೇದ  ಔಷಧೀಯ ಪದ್ಧತಿಯಲ್ಲಿ ಬಲು ಪ್ರಮುಖವಾದ  ಸ್ಥಾನವನ್ನು  ಹೊಂದಿದೆ. ನುಸಿ ಅಂತಹ ಕೀಟಗಳನ್ನು  ನೆಕ್ಕಿಯ ಹೊಗೆ ಹಾಕಿ ಓಡಿಸುವ ಸಾಂಪ್ರದಾಯಿಕ  ಪಧ್ಧತಿಯನ್ನು ರೈತರು ಇಟ್ಟುಕೊಂಡಿದ್ದರು. ಈ ನೆಲೆಯಲ್ಲಿ  ಕಾನದ ಕಟದರಿಗೆ ಜನಪದ ಔಷಧೀಯ  ಪಧ್ಧತಿಯ ಅರಿವಿದ್ದು ಜನರ ರೋಗಗಳನ್ನು  ಅನಿಷ್ಟಗಳನ್ನು ನಿವಾರಣೆ  ಮಾಢುತ್ತಿದ್ದರು ಎಂಬುದನ್ನು  ಕರಂಗೋಲು ಸೂಚ್ಯವಾಗಿಸುತ್ತದೆ. ಈ ಮುಖ್ಯ  ವಿಚಾರವನ್ನು  ಕರಂಗೋಲು ಪಾತ್ರಧಾರಿಗಳ ಕೈಗೆ ನೆಕ್ಕಿಯ ಸೊಪ್ಪನ್ನು ಕೊಟ್ಟು  ನಿರ್ವಹಿಸುತ್ತದೆ ಬೇರೆ ಮಾತುಗಳಲ್ಲಿ  ಹೇಳುವುದಾದರೆ  ಕರಂಗೋಲು ಕುಣಿತ ಮಾಡುವ ಆ ಇಬ್ಬರು  ಪಾತ್ರಧಾರಿಗಳು #ಟ್ರಾನ್ಸ್‌‌   ಗೆ ಏರಿಸಲ್ಪಟ್ಟ  ಕಾನದ ಕಟದರೆ ಆಗಿರುತ್ತಾರೆ ಹೊರತು ಅವರು ಬರೀ  ಪಾತ್ರಧಾರಿಗಳಲ್ಲ.
b) #ಅಲುಂಬುಡದ ಕೋಲು:
ಪಾಜೇಗುಡ್ಢೆಯ ನೀರು ತೆಗೆಯುವ ಎಪಿಸೋಡ್ ನಲ್ಲಿ ಅಲುಂಬುಡದ ಕೋಲನ್ನು  ಪಾಡ್ದನಗಳು ಅಲೌಕಿಕಕ್ಕೆ ಏರಿಸಿವೆ. ಮೂಲತಃ  ಮೃದುವಾಗಿರುವ ಅಲುಂಬುಡ ಗಿಡದ  ಕೋಲನ್ನು ಬಳಸಿ ಕಲ್ಲನ್ನು  ಅಗೆದು ಕಾನದ ಕಟದರು ನೀರು ತೆಗೆದ ಅಸಾಮಾನ್ಯತೆಯನ್ನು ಪಾಡ್ದನಗಳು ವ್ಯಕ್ತಪಡಿಸುತ್ತವೆ. ಈ ರೀತಿ ಉಲ್ಲೇಖಗೊಳ್ಳುವ ಅಲುಂಬುಡ ಔಷಧೀಯ ಗುಣವನ್ನು ಹೊಂದಿದ್ದು  ಅದರ ಬಳಕೆಯನ್ನು  ಕಾನದ ಕಟದರು ಮಾಡುತ್ತಿದ್ದರು  ಎಂಬ ಸೂಚನೆಯನ್ನು  ಪಾಡ್ದನಗಳು ಕೊಡುತ್ತಿವೆ.  ಮೂಲತಃ  ಅಲುಂಬುಡದ ಗಿಡ ಮೃದುವಾಗಿದ್ದರೂ ಅದರ ಕೋಲಿನಿಂದ  ಮನುಷ್ಯರ ದೇಹಕ್ಕೆ  ಪೆಟ್ಟು ಕೊಟ್ಟರೆ ಮೇಲು ಮೈಗೆ ಏನೂ ಗಾಯವಾದಂತೆ ಕಂಡುಬರದಿದ್ದರೂ ದೇಹದ ಒಳಗೆ ನುಜ್ಜು ಗಾಯವಾಗುತ್ತದೆ; ರಕ್ತ  ಹೆಪ್ಪುಗಟ್ಟುತ್ತದೆ  ಎಂಬ ವಿಚಾರವನ್ನು ದಾಸಪ್ಪ  ಎಡಪದವು  ಗಮನಕ್ಕೆ ತರುತ್ತಾರೆ. ಈ ಹಿನ್ನೆಲೆಯಲ್ಲಿ  ಅಲುಂಬುಡ ಕೋಲಿನ ಅಲೌಕಿಕತೆಯು ಕರಂಗೋಲಿಗೆ ಸಂಬಂಧಿಸಿದೆ ಎಂಬುದಾಗಿ  ಕಂಡು ಬರುತ್ತದೆ.

c)  #ಕರಿಯಂಗಾಳು>ಕರಂಗೋಲು>ಸುಟ್ಟ ಕಾಳು:
ಕರಂಗೋಲು ಪಾಡ್ದನದ ಕೇಂದ್ರ  ಇರುವುದೇ ಕಾನದ ಕಟದರು  ಭತ್ತದ  ವಿಶೇಷ ತಳಿಯಾದ #ಅತಿಕಾರೆ ಬೀಜವನ್ನು  ತುಳುನಾಡಿಗೆ ತಂದು ಕೃಷಿ ಮಾಡುವ ಸಂದರ್ಭದಲ್ಲಿ  ಎದುರಿಸುವ ಪಂಥಾಹ್ವಾನಗಳು, ಅಡೆ ತಡೆಗಳನ್ನು  ಎದುರಿಸಿ ಅವುಗಳನ್ನು ಮೀರಿದರಲ್ಲಿ ಇದೆ. ಕಾನದ ಕಟದರು ಅತಿಕಾರೆ ಭತ್ತದ  ಕೃಷಿ ಮಾಡಬೇಕೆಂದು  ನಿಶ್ಚಯಿಸಿಕೊಂಡು ಅದರ ತಳಿಯನ್ನು  ಕೊಡಲು ತುಳುನಾಡಿನ ಯಾವ ಜನರು ಮುಂದೆ ಬರುವುದಿಲ್ಲ . ಇದರಿಂದ ಬೇಸತ್ತ  ಅವರು ಕಡ್ತಿಕಲ್ಲ ಘಾಟಿಯ ಮೂಲಕ ಪಶ್ಚಿಮ  ಘಟ್ಟವನ್ನು ದಾಟಿ ಇಕ್ಕೇರಿಯ ಕಡೆಗೆ  ಹೋಗಿ ಅಲ್ಲಿಂದ ಅತಿಕಾರೆ ತಳಿಯನ್ನು  ಸಂಗ್ರಹಿಸಿಕೊಂಡು ಬರುತ್ತಾರೆ. ಇಕ್ಕೇರಿಯ ಜನ ಅತಿಕಾರೆಯ ತಳಿಯನ್ನು  ಕೊಟ್ಟರೂ ಅದನ್ನು  ಸುಟ್ಟು  ಕೊಡುತ್ತಾರೆ. ಅದಕ್ಕೆ  ಅದು #ಕರಿಯಂಗಾಳು (ಸುಟ್ಟ  ಕಾಳು /ಧಾನ್ಯ) > ಕರಂಗೋಲು ಎಂದೆನಿಸಿಕೊಳ್ಳುತ್ತದೆ. ಅತಿಕಾರೆಯನ್ನು ತರುವಲ್ಲಿ ಕಾನದ ಕಟದರು ಎದುರಿಸಿದ  ಕಷ್ಟಗಳನ್ನು  ಪಾಡ್ದನ  ಬೇರೆ ಬೇರೆ  ರೀತಿಯಾಗಿ ವಿವರಿಸುತ್ತದೆ. ಮಾದೆರಿನ ದೊಡ್ಡ  ಕಾಡು ತಿರುಗಿಸಿ ತರಬೇಕು, ಕೊಟ್ಟೆಯ ಮುಳ್ಳಿನಲ್ಲಿ ಸಿಕ್ಕಿಸಿ ತರಬೇಕು, ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು, ಕೊಟ್ಟೆಯ ಮುಳ್ಳಿನಲ್ಲಿ ಸಿಕ್ಕಿಸಿ ತರಬೇಕು, ಇಟ್ಟೆಯ ಸೊಪ್ಪಿನಲ್ಲಿ ಹೊದಿಸಿ ತರಬೇಕು, ಗೆರಟೆಯ ನೀರಿನಲ್ಲಿ  ಮುಳುಗಿಸಿ ತರಬೇಕು; ಇಂತಹ ಪಂಥಗಳ ಜೊತೆ ಸೆಣಸಾಡಿ  ಸುಟ್ಟ ಅತಿಕಾರೆಯನ್ನು ತರುತ್ತಿದ್ದಾಗ ಇನ್ನೇನು  ಕಡ್ತಿಕಲ್ಲ ಘಾಟಿ ಇಳಿಯಬೇಕು ಎನ್ನುವಷ್ಟರಲ್ಲಿ ಚವುಂಡಿ ಎಂಬ ಗಡಿ ರಕ್ಷಕಿ  ಕಾನದ ಕಟದರಿಗೆ ದಾರಿಯೇ ಬಿಟ್ಟು ಕೊಡುವುದಿಲ್ಲ. ಕೊನೆಗೆ ಜಗಳ ತಾರಕಕ್ಕೇರಿ ಕೊನೆಗೆ ಕಾನದ ಕಟದರಿಗೆ ಅತಿಕಾರೆಯನ್ನು ಚವುಂಡಿ ಕೊಟ್ಟು  ಕಳುಹಿಸುತ್ತಾಳೆ. ಹೀಗೆ ಸಾಹಸದಿಂದ  ಸುಟ್ಟ  ಅತಿಕಾರೆ ಕಾಳನ್ನು  ಬಿತ್ತಿ ಭತ್ತವನ್ನು  ಬೇಳೆಯುತ್ತಾರೆ. ಸುಟ್ಟ  ಕಾಳಿಂದ ಭತ್ತವನ್ನು  ಬೆಳೆದಿದ್ದೇ ಕಾನದ ಕಟದರ ಮಾಂತ್ರಿಕತೆ ಮತ್ತು ಆ ಅತಿಕಾರೆಯೇ ಮಾಂತ್ರಿಕ  ಬೆಳೆ... ಅದುವೇ ಕಾನದ ಕಟದರ ಕಾರ್ನಿಕತೆ. ಈ ಕಾರಣಕ್ಕೆ ಕಾನದ ಕಟದರ ಅಲೌಕಿಕ ನೆಲೆಗೆ ವ್ಯಾಪಿಸಿ ಜನರಿಂದ ಆರಾಧನೆಗೊಳ್ಳುವಂತಾಗುತ್ತದೆ. ಈ ಧಾರ್ಮಿಕತೆಯ -ಮಾಂತ್ರಿಕ  ಪ್ರಕ್ರಿಯೆಯ ಸ್ಮರಣೆಯನ್ನು  ಆದಿ ದ್ರಾವಿಡ  ಸಮುದಾಯ ತಲೆಮಾರಿಂದ ತಲೆಮಾರಿಗೆ ಕರಂಗೋಲು ಕುಣಿತದ ಮೂಲಕ ದಾಟಿಸುತ್ತಾ ಬಂದಿದೆ.

ಸಂಶೋಧನಾಕಾರರಿಂದ, ಬೇರೆ ಬೇರೆ ಬರಹಗಾರರಿಂದ ಕರಂಗೋಲು ಅಂದರೆ ಕರದಲ್ಲಿ ಹಿಡಿಯುವ ಕೋಲು, ಕರಿಯ ಬಣ್ಣದ  ಕೋಲು, ಕರಿಯಂಗಾಳು ಎಂದೆಲ್ಲಾ  ಆರ್ಥೆಸಿಕೊಂಡಿದ್ದನ್ನು ನಾವು ಈಗಾಗಲೇ  ವಿಶ್ಲೇಷಣೆಗೆ ಒಳಪಡಿಸಿದ್ದೇವೆ. ಕರಂಗೋಲು ಕುಣಿತದ ಅರ್ಥವನ್ನು  ಚಿನ್ನಪ್ಪ ಗೌಡರು ಇನ್ನೂ ಮುಂದುವರಿದು ಕೊಡಲು ಯತ್ನಿಸಿದ್ದಾರೆ.  ಕರಂಗೋಲು ವೇಷಧಾರಿಗಳಿಗೂ ಕೊಂರ್ಗು ಪಕ್ಷಿಯ ಬಣ್ಣಕ್ಕೂ ಸಂಬಂಧವಿದೆ (ಏರ್ಯ ಲಕ್ಷ್ಮಿ  ನಾರಾಯಣ ಆಳ್ವ),  ಮಂಗಾರ ಮಾನಿಗ ಕುರೋವು ದಂಪತಿಗಳ ಮಕ್ಕಳಿಗೆ  ಮಾತ್ರ  ಕರಂಗೋಲು ತರಲು ಸಾಧ್ಯ-- ಆ ಮಕ್ಕಳೇ ಕಾರಣಿಕದ ಜೇರ್ಲು-ಅದುವೇ ಕರಂಗೋಲು" (ಡಾ. ಕೆ.ಚಿನ್ನಪ್ಪ ಗೌಡ ) ಎಂದೆಲ್ಲಾ  ವಿಶ್ಲೇಷಿಸಿದ್ದಾರೆ. ಇದಕ್ಕೆ  ವೈರುಧ್ಯವಾಗಿ ಡಾ.ಕೆ.ಚಿನ್ನಪ್ಪ ಗೌಡರು ".....ಪಠ್ಯದ ವಿವರಗಳನ್ನು  ಕ್ರೋಢಿಕರಿಸಿ "ಕಾರಣಿಕದ ಕೋಲು" ಕರಂಗೋಲು ಎಂದು ಅರ್ಥ  ಮಾಡುವ ಮನಸ್ಸಾಗುತ್ತದೆ" ಎಂದೆನ್ನುತ್ತಾರೆ. (ಸಿರಿ; ಪುಟ,398)

(ಈ ಅಧ್ಯಯನವು ಆದಿ ದ್ರಾವಿಡ  ಸಮುದಾಯದ ಮೇಲಿನ ಸುಮಾರು ಹದಿನೈದು  ವರ್ಷಗಳ  ಜನಾಂಗೀಕ ಅಧ್ಯಯನದ ಫಲಶ್ರುತಿಯಾಗಿದೆ..ಅಧ್ಯಯನ  ಸಂದರ್ಭದಲ್ಲಿ  ಬಾಬು ಬಳ್ಲಾಜೆ ಅಂತಹ ಹಲವಾರು ಪಾಡ್ದನಕಾರರು ಹಾಗೂ ಆದಿ ದ್ರಾವಿಡ  ಸಮುದಾಯದ  ಹಲವಾರು ಮಾಹಿತಿದಾರರನ್ನು ಸಂದರ್ಶನ ಮಾಡಿ ಅವರು ಕೊಟ್ಟ ಮಾಹಿತಿಗಳನ್ನು  ಅಧ್ಯಯನದಲ್ಲಿ ಬಳಕೆ ಮಾಡಲಾಗಿದೆ )

#ಲೇಖಕರು: #ರಘು ಧರ್ಮಸೇನ
#ಸಂಪರ್ಕಕ್ಕೆ_9964478404

Read Post | comments

ಸಾಮಾಜಿಕ ದೃಷ್ಟಿಯೆ ಭಾಷೆಯ ಶ್ರೀಮಂತಿಕೆ !

ಪಾಟು  ಐಲೇಸಾದ  ಮಹತ್ವಾಂಕಾಕ್ಷೆಯ  ಹಾಡು . 

ನಿನ್ನೆ   ಕಟಪಾಡಿಯಿಂದ  ಮಂಚ ಕಲ್ಲಿಗೆ   ಹೋಗುವ ದಾರಿಯ ಪಾಂಬೂರಿನಲ್ಲಿ ಸುಂದರ ಎಂ ಸಂಜೀವ, ರಮೇಶ್ ಗುಂಡಾವು,ಪಾಂಗಲ ಬಾಬು ಕೊರಗ ಹಾಗೂ ಕಮಲ ಪಾಂಬೂರು ಇವರ ಸಹಕಾರದಲ್ಲಿ ಕೊರಲ್  ಕಲಾ  ತಂಡ ಕುಡ್ಲ , ನವೋದಯ ಸಾಂಸ್ಕೃತಿಕ ಕಲಾತಂಡ   ಪಾಂಬೂರು   ಎಂಬೆರಡು ವಿಶೇಷ ಪರಿಣತಿಯ  ನೃತ್ಯ ತಂಡಗಳೊಂದಿಗೆ ಅದ್ಭುತವಾಗಿ ಚಿತ್ರೀಕರಣಗೊಂಡಿದೆ.

 ಸೆಪ್ಟೆಂಬರ್ 28ರಂದು  ನಿಟ್ಟೆ ಯೂನಿವರ್ಸಟಿಯಲ್ಲಿ  ಈ ಹಾಡು ಔಪಚಾರಿಕವಾಗಿ ಬಿಡುಗಡೆಗೊಳ್ಳಲಿದೆ.

 ಚಿತ್ರೀಕರಣದುದ್ದಕ್ಕೂ ಮೆಚ್ಚಿಕೊಳ್ಳುವಂತಹುದು  ಈ ತಂಡದ ತತ್ಪರತೆ , ನೃತ್ಯ ಕೌಶಲ್ಯ  ಮತ್ತು ಅವರೆಲ್ಲಾ ತಮ್ಮ ಭಾಷೆಯ ಬಗ್ಗೆ ಇಟ್ಟುಕೊಂಡಿದ್ದ ಸದಭಿಮಾನ.  ಆ ತತ್ಪರತಯಿಂದಲೆ  ಮಂಗಳೂರಿನಿಂದ ಉಡುಪಿಗೆ ಬಂದು  ಮಳೆಯೊಳಗೆ ನೆಂದು  ಈ ತಂಡ ಹಾಡಿನ ತಾಳಕ್ಕೆ ತಕ್ಕ  ಹೆಜ್ಜೆ ಹಾಕುವುದು ಸಾಧ್ಯವಾಗಿದೆ! 

ನಿರಂತರ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ  ನಾಗರೀಕ ಸಮಾಜದಲ್ಲಿ  ಈ ಆದಿ ಜನಾಂಗ  ಹೆಣ್ಣು ಮಗುವಿನ ಜನನವನ್ನು  ಸಂಭ್ರಮಿಸುವ ರೀತಿ   ಅನುಕರಣೀಯ .  . ಬಾಬು ಕೊರಗ ಅವರ  ಬರೆಹದಲ್ಲಿ ಅದು ಮೂಡಿದ ರೀತಿಯಂತೂ ಅನನ್ಯ. 

ಅಪ್ಪೆ ಚೂಕ್,ನನತ ಕೊಡಿನ್,ಆಸೆ ಜಿಟ್ಟಿಡ್

(=ತಾಯಿ ತನ್ನ ಕುಡಿಯನ್ನು  ಆಶಾ ದೃಷ್ಟಿಯಿಂದ ನೋಡಿದಳು) 

ಅನ್ನ ಅಂತ್ಯ ಕಾಲಗೊಂಜಿ ಆಧಾರಾಕತ!

(=ನನ್ನ ಅಂತ್ಯ ಕಾಲಕ್ಕೊಂದು  ಆಧಾರವಾಯಿತಲ್ಲ!) 

ರಡ್ಡು ಪೊರ್ತು ಗಂಜಿ ತೆಲಿ ಅಂಗ ತರ್ದತ.

(= ಎರಡು ಹೊತ್ತು ಗಂಜಿ ನನಗೆ ಕೊಡುವಳಲ್ವ   )

ಪೊನ್ನು ಕೂಜಿ, ಅನ್ನ ಪೆರಂಟ ಬೆರಿಯೆ ಬರ್ದತ||ಅಪ್ಪೆ|| 

(=ಹೆಣ್ಣು ಮಗಳು  ನನ್ನ ಬೆನ್ನ ಹಿಂದೆಯೆ ಕಾಯುವಳಲ್ವ {ಬರುವಳಲ್ವ})

ಭಾಷೆಯ ಶ್ರೀಮಂತಿಕೆ ತಿಳಿಯುವುದೆ  ಆ ಭಾಷೆ ಬೆಳೆಸಿಕೊಂಡ ಸಾಮಾಜಿಕ ಪ್ರಜ್ಞೆಯಿಂದ  . ಅದು ಕೊರಗ ಭಾಷೆಯಲ್ಲಿ ಪ್ರಕೃತಿದತ್ತವಾಗಿ  ವಿಪುಲವಾಗಿದೆ ಎನ್ನುವುದು ಈ ಹಾಡನ್ನು ಗಮನವಿಟ್ಟು ಕೇಳಿದಾಗ ತಿಳಿಯುವ ಸತ್ಯ .  

ಮುಗ್ಧ ಸಮುದಾಯದ  ಈ ಸಹಜ ದೃಷ್ಟಿ ಇದೆ ರೀತಿಯಲ್ಲಿ  ಮುಂದುವರಿಯಲಿ . ಆಧುನಿಕತೆಯ  ಮಹಾ ಮಾಯೆ ಅವರನ್ನು ಅತಿಯಾಗಿ ಕಾಡದಿರಲಿ , ಹುಚ್ಚು ಹೊಳೆಯಲ್ಲಿ ತಮ್ಮತನ ಕೊಚ್ಚಿ ಹೋಗದಂತೆ ಕಾಪಿಡಲಿ   ಎನ್ನುವ ಆಶಾ ಭಾವದೊಂದಿಗೆ    ನಿಮ್ಮಲ್ಲಿಗೆ  ಕೂಜಿನ ಪಾಟುವಿನೊಂದಿಗೆ ಬರುತ್ತಿದ್ದೇವೆ!. 

ಐಲೇಸಾ ತಂಡದ ಅಜೇಶ್ ಚಾರ್ಮಾಡಿ ಮತ್ತು ಗಾಯಕ ಪ್ರಕಾಶ್ ಪಾವಂಜೆಯವರ   ಮುತುವರ್ಜಿಯಲ್ಲಿ ನಡೆದ  ಚಿತ್ರೀಕರಣಕ್ಕೆ  ಆದಿತ್ಯ ಆಚಾರ್ಯ ಮತ್ತು ಅನೀಶ್ ಕಿನ್ನಿಗೋಳಿ ಸಮರ್ಥವಾಗಿ ಸಾಥ್ ನೀಡಿದರು.  

ಐಲೇಸಾ  ಸ್ಥಳೀಯ ತಂಡದೊಂದಿಗೆ ಬೆರೆತ  ಸಂಭ್ರಮಕ್ಕೆ ಕೊನೆಯಲ್ಲಿ  ತಂಡದೊಂದಿಗೆ ಅವರು ಕುಪ್ಪಳಿಸಿದ ರೀತಿಯೇ  ಸಾಕ್ಷಿ! . 

ಐಲೇಸಾದ  ಈ  ವಿಶೇಷ ಪ್ರಯತ್ನಗಳಿಗೆ  ಚಂದಾದಾರರಾಗುವ ಮೂಲಕ ಸಹಕರಿಸಿ . 

  • ಶಾಂತಾರಾಮ್ ಶೆಟ್ಟಿ 
  • *ಟೀಂ ಐಲೇಸಾ*

Read Post | comments

ತುಳುವರ್ಲ್ಡ್ ಫೌಂಡೇಷನ್ ಚಟುವಟಿಕೆಗೆ ಕಟೀಲಿನಿಂದ ಚಾಲನೆ, ತುಳುವಿಗಾಗಿ ಸಮಗ್ರ ತುಳುನಾಡ ಜನತೆ ಕೈಜೋಡಿಸಬೇಕು: ಸರ್ವೋತ್ತಮ ಶೆಟ್ಟಿ ಆಹ್ವಾನ

ಕಟೀಲು(ಸೆ.4) : ತುಳು ಭಾಷಾ ಸಂಸ್ಕೃತಿಯ ಅಭ್ಯುದಯಕ್ಕಾಗಿ ಕಾಳಜಿಯ ಕಾಯಕ ನಿರವಾಗುವ ಧ್ಯೇಯೋದ್ದೀಶದಿಂದ ಅಸ್ತಿತ್ವಕ್ಕೆ ಬಂದಿರುವ ತುಳು ವರ್ಲ್ಡ್ ಫೌಂಡೇಷನ್ ಚಟುವಟಿಕೆಗಳಿಗೆ 
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಚಾಲನೆಯಾಯಿತು. 
ಕಟೀಲು ಕ್ಷೇತ್ರದ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರ ಉಪಸ್ಥಿತಿ ಮತ್ತು ಗೌರವಾಧ್ಯಕ್ಷತೆಯ ಸಂಘಟನೆಯ ಸೃಜನಶೀಲ ಚಟುವಟಿಕೆಯ ಮುನ್ನಡೆಗೆ ಕಟೀಲು ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂಬಂಧ ಕಟೀಲು ಕ್ಷೇತ್ರದಲ್ಲಿ ನಡೆದ ಫೌಂಡೇಷನ್ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರು "ಪಂಚ ದ್ರಾವಿಡ ಭಾಷೆಗಳಲ್ಲೇ ಪ್ರಾಚೀನವಾದ ತುಳು ಭಾಷೆಯಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಆ ಕುರಿತು ಅರಿತು ಅಭಿಮಾನ ಪಡಬೇಕು. ತುಳು ಎಂದರೆ ಕೇವಲ ಮನೋರಂಜನಾ ಪ್ರದರ್ಶನಗಳಲ್ಲ. ಅದು ಬದುಕಿನ ಸಂಸ್ಕೃತಿ. ಇದರ ರಕ್ಷಣೆಗಾಗಿ ಜಗತ್ತಿನ ತುಳುವರೆಲ್ಲರೂ ಒಂದೇ ಕೊಡೆಯಡಿ ನೆರೆದು, ಒಂದೇ ಕುಟುಂಬದವರಂತೆ ದುಡಿಯಬೇಕು" ಎಂದರು.

ತುಳುವಿಗಾಗಿ ಕೈಜೋಡಿಸಿ
ಫೌಂಡೇಷನ್ ಅಧ್ಯಕ್ಷ ಅಬುದಾಬಿಯ ಸರ್ವೋತ್ತಮ ಶೆಟ್ಟಿ ಮಾತನಾಡಿ "ತುಳುವರಲ್ಲಿ ಒಗ್ಗಟ್ಟಿನ ಕೊರತೆ ಇದೆ. ತುಳು ಎಂದರೆ ಕೆಲವು ಜನಾಂಗದ ಭಾಷೆಯಲ್ಲ, ಅದು ಕರಾವಳಿಯ ಜನತೆಯ ಜೀವನ ಸಂಸ್ಕೃತಿ. ಈ ಕುರಿತು ಅರಿಯಬೇಕು, ಅಭಿಮಾನದಿಂದ ಜಗತ್ತಿನ ತುಳುವರೆಲ್ಲರೂ ಒಗ್ಗೂಡಬೇಕು. ತುಳುವಿನ ಬಹುಕಾಲದ ಬೇಡಿಕೆಗಳು  ಈಡೇರಬೇಕು" ಎಂದರು.


ಫೌಂಡೇಷನಿಗೆ ಕಟೀಲು ಆಸ್ಥಾನ

 ಜಾಗತಿಕ ತುಳು ಫೌಂಢೇಷನಿನ    ಔದ್ಯೋಗಿಕ ಉದ್ಘಾಟನಾ ಸಮಾರಂಭ ಶೀಘ್ರವೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೌಂಡೇಷನಿನ ಕೇಂದ್ರ ಕಛೇರಿ ಕಾರ್ಯಾಚರಿಸಲು ಕಟೀಲು ಕಾಲೇಜಿನ ಕೋಣೆಯೊಂದನ್ನು ಉಚಿತವಾಗಿ ನೀಡಲಾಗುವುದೆಂದು ಸಭೆಯಲ್ಲಿ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ ಆಸ್ರಣ್ಣರು ಘೋಷಿಸಿದರು.

ಕಟೀಲಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿಂದು ಫೌಂಢೇಷನ್ ಸ್ಥಾಪಕ, ನಿರ್ದೇಶಕ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಅಗತ್ಯ, ಅನಿವಾರ್ಯತೆ, ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಫೌಂಢೇಷನ್ ಪ್ರಧಾನ ಕಾರ್ಯದರ್ಶಿ, ಲೇಖಕ, ಚಿಂತಕ ಪ್ರೊ. ಪುರುಷೋತ್ತಮ ಬಲ್ಯಾಯ ಬೆಳ್ಮಣ್ಣು, ಗೌ. ಸದಸ್ಯರಾದ ಲೇಖಕಿ ವಿಜಯಲಕ್ಷ್ಮಿ ಶೆಟ್ಟಿ, ಡಾ. ಮಾಧವ ಎಂ.ಕೆ, ಉಪಾಧ್ಯಕ್ಷೆ ತಾರಾ ಆಚಾರ್ಯ ಉಡುಪಿ, ಉಪಾಧ್ಯಕ್ಷ ಪ್ರೊ. ಡಿ.ಯದುಪತಿ ಗೌಡ ಬೆಳ್ತಂಗಡಿ,  ಚಂದ್ರಹಾಸ  ದೇವಾಡಿಗ ಮೂಡಬಿದ್ರೆ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ನಾ. ಚಂಬಲ್ತಿಮಾರ್, ಶಂಕರ ಸ್ವಾಮೀಕೃಪ, ಸುಖಾಲಾಕ್ಷಿ ವೈ. ಸುವರ್ಣ, ಸಂಚಾಲಕಿ ಆಶಾ ಶೆಟ್ಟಿ ಅತ್ತಾವರ, ಕಾರ್ಯದರ್ಶಿ ಭಾಸ್ಕರ್ ಕುಂಬ್ಳೆ, ಮುರಳೀ ಭಟ್ ಉಪ್ಪಂಗಳ,  ಮೊದಲಾದವರು ಉಪಸ್ಥಿತರಿದ್ದರು.
ತುಳು ಭಾಷೆ, ಸಂಸ್ಕೃತಿ ಕುರಿತು ಜಾಗತಿಕ ತುಳುವರನ್ನು ಸಂಘಟಿಸುವುದರ ಜತೆಯಲ್ಲೇ ತುಳುವಿನ ಕುರಿತಾದ ಅಧ್ಯಯನಾತ್ಮಕ ದಾಖಲೀಕರಣ ಮತ್ತು ಅಕಾಡೆಮಿಕ್ ಕೆಲಸಗಳು ನಡೆಯಬೇಕೆಂದು ಸಭೆ ನಿರ್ಧರಿಸಿತು.
ಈ ದೃಷ್ಟಿಯಲ್ಲಿ ಫೌಂಡೇಷನ್ ಮುಂದಿಡುವ ಹೆಜ್ಜೆಗೆ ವಿಶ್ವದ ಸರ್ವ ತುಳುವರ ಬೆಂಬಲ ಬೇಕೆಂದು ಬಯಸಲಾಯಿತು

Read Post | comments

SUDDI

tuluworld

TULUWORLD CHANNEL

Popular Posts

ANAVARANA

KATHE

PADHO-KABITHE

BARAVU

 

Copyright © 2011 Tuluworld - All Rights Reserved