Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

"ಅಸ್ತಂಗತರಾದ ಸುಪ್ರಸಿದ್ಧ ಎದುರು ವೇಷಧಾರಿ ಸಂಪಾಜೆ ಶೀನಪ್ಪ ರೈ"


ಬರಹ - ಎಂ.ಶಾಂತರಾಮ ಕುಡ್ವ

ಸಂಚಾಲಕರು , ಯಕ್ಷಸಂಗಮ
ಮೂಡುಬಿದಿರೆ
ಯಕ್ಷಗಾನದ "ಎದುರು ವೇಷಧಾರಿ"ಯಾಗಿ ಸುಪ್ರಸಿದ್ಧರಾದ ಸಂಪಾಜೆ ಶೀನಪ್ಪ ರೈಯವರು ಅಪ್ರತಿಮ ಕಲಾವಿದರು ಹಾಗೂ ಸಾಧಕರು . ಸರಳ , ಸಜ್ಜನಿಕೆಯನ್ನೇ ಮೈಗೂಡಿಸಿಕೊಂಡು, ಎಲ್ಲರೊಂದಿಗೂ ಆತ್ಮೀಯತೆಯನ್ನೇ ಬೆಳೆಸಿಕೊಂಡು "ಅಜಾತಶತ್ರು" ಎನಿಸಿಕೊಂಡವರು. ತಮ್ಮ ಆರು ದಶಕಗಳಿಗೂ ಮೀರಿದ ತಿರುಗಾಟದಲ್ಲಿ ರಂಗಸ್ಥಳದಲ್ಲೂ , ಚೌಕಿಯಲ್ಲೂ ಚೌಕಟ್ಟನ್ನು ಮೀರದ ಕಲಾವಿದರು .ಅವರ ಸಹ ಕಲಾವಿದರೇ ನೆನಪಿಸುವಂತೆ ರೈಗಳು ಯಾರೊಂದಿಗೂ ನಿಷ್ಟುರ ಕಟ್ಟಿಕೊಂಡವರಲ್ಲ , ತಾಳ್ಮೆಯ ಸಾಕಾರಮೂರ್ತಿಗಳೇ ಆಗಿದ್ದು , ಸಹ ಕಲಾವಿದರನ್ನು ಹಿರಿಯ ಕಿರಿಯ ಎಂಬ ಭೇದವಿಲ್ಲದೇ ಸಮಾನವಾಗಿ ಗೌರವಿಸುತ್ತಿದ್ದರು ಎಂಬುದು ಅವರ ವ್ಯಕ್ತಿತ್ವದ ಔನ್ನತ್ಯಕ್ಕೊಂದು ಸ್ಪಷ್ಟ ಉದಾಹರಣೆ.


ಸಂಪಾಜೆ ಸಮೀಪದ ಮದೇಪಾಲು ಎಂಬಲ್ಲಿ ರಾಮಣ್ಣ ರೈ - ಕಾವೇರಿ ರೈ ದಂಪತಿಯ ಮೊದಲ ಪುತ್ರರಾಗಿ 07.06.1943 ರಲ್ಲಿ ಜನಿಸಿದ ಶೀನಪ್ಪ ರೈಯವರು ಬಡತನದಲ್ಲೇ ಬಾಲ್ಯವನ್ನು ಕಳೆದವರು . ತಮ್ಮ 4 ನೇ ತರಗತಿಯ ವಿದ್ಯಾಭ್ಯಾಸ ಪೂರೈಸಿದ ನಂತರ , ತಮ್ಮ ತಂದೆಯವರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು . ತಂದೆ ರಾಮಣ್ಣ ರೈಗಳು ಕಲ್ಲುಗುಂಡಿಯ ಯಕ್ಷಗಾನ ಪೋಷಕರಾದ ಕೀಲಾರು ಗೋಪಾಲಕೃಷ್ಣರ ಒಕ್ಕಲಾಗಿದ್ದು , ಅವರ ಜಮೀನನ್ನು ಗೇಣಿಗೆ ಪಡೆದು ಕೃಷಿಕರಾಗಿದ್ದು , ಅಂದಿನ ಕಾಲದ ತಾಳಮದ್ದಳೆ ಅರ್ಥಧಾರಿಗಳೂ , ಕಲಾವಿದರೂ ಆಗಿದ್ದ ಕಾರಣ , ಶೀನಪ್ಪ ರೈಯವರಿಗೂ ಯಕ್ಷಗಾನದ ನಂಟು ಅಂಟಿತು . ತಮ್ಮ ತಂದೆಯವರಲ್ಲೇ ಅರ್ಥಗಾರಿಕೆಯನ್ನೂ , ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನೂ ಕಲಿತರು .ಪುಟ್ಟ ಬಾಲಕ ಶೀನಪ್ಪ ರೈಯವರ ಯಕ್ಷಗಾನದ ಆಸಕ್ತಿ ಗಮನಿಸಿದ , ಅಂದಿನ ಕಾಲದ ಯಕ್ಷಗಾನದ ಪೋಷಕರಾದ ಶಾಂತರಾಮ ಶೆಟ್ಟಿ ಎಂಬವರು , ರಾಮಣ್ಣ ರೈಯರನ್ನು ಒಪ್ಪಿಸಿ ಶೀನಪ್ಪ ರೈಗಳನ್ನು ಕುಂಡಾವು ಮೇಳದ ಯಜಮಾನರಾದ ಕಲ್ಲಾಡಿ ಕೊರಗ ಶೆಟ್ಟರಲ್ಲಿ ಮಾತಾಡಿ , ಕಲ್ಲಾಡಿಯವರೇ ನಡೆಸುತ್ತಿದ್ದ ಯಕ್ಷಗಾನ ನಾಟ್ಯ ತರಗತಿಗೆ ಸೇರಿಸಿದರು .ಅಲ್ಲಿ ಅಂದಿನ ಸುಪ್ರಸಿದ್ಧ ಗುರುಗಳಾದ ಕಾವು ಕಣ್ಣರಲ್ಲಿ ಯಕ್ಷಗಾನದ ಸಂಪೂರ್ಣ ಹೆಜ್ಜೆಗಾರಿಕೆಯನ್ನೂ , ಮಾಸ್ತರ್ ಕೇಶವರಲ್ಲಿ ಭರತನಾಟ್ಯವನ್ನೂ ಅಭ್ಯಸಿಸಿದರು . ಬಣ್ಣಗಾರಿಕೆಯನ್ನು ಅಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿ ಕುಂಬಳೆ ಕುಟ್ಯಪ್ಪುರಿಂದ ಕರಗತ ಮಾಡಿಕೊಂಡರು . ಅದೇ ವರ್ಷ ಕಲ್ಲಾಡಿಯವರ ಯಾಜಮಾನ್ಯದ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಗೆ ಸೇರಿ ತಿರುಗಾಟ ಮಾಡಿದರು .



ಇರಾದಲ್ಲಿ 3 ವರ್ಷಗಳ ತಿರುಗಾಟ ಪೂರೈಸಿದ ಹಂತದಲ್ಲಿ ತಂದೆಯವರು ಅಸೌಖ್ಯರಾದಾಗ , ಯಕ್ಷಗಾನ ಬಿಟ್ಟು 5 ವರ್ಷಗಳ ಕಾಲ ಕೃಷಿ ಕಾರ್ಯವನ್ನು ಕೈಗೊಂಡರು . ಒಮ್ಮೆ ಕಲ್ಲುಗುಂಡಿಯಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರ ಸುಬ್ರಹ್ಮಣ್ಯ ಮೇಳ ಬಂದಾಗ , ಅಂದು ಮೇಳದಲ್ಲಿ ಮೇನಕೆ ಪಾತ್ರ ಮಾಡಬೇಕಾದ ಕಲಾವಿದರು ಗೈರು ಹಾಜರಾಗಿದ್ದರು . ಶೀನಪ್ಪ ಭಂಡಾರಿಯವರ ಒತ್ತಾಯಕ್ಕೆ ರೈಗಳು ಮೇನಕೆ ಪಾತ್ರ ನಿರ್ವಹಿಸಿದರು . ಈ ಘಟನೆ ಶೀನಪ್ಪ ರೈಯವರ ಬದುಕಿಗೆ ತಿರುವು ತಂದು ಕೊಟ್ಟಿತು . ನಂತರ ಆ ವರ್ಷ ಇಡೀ ಸುಬ್ರಹ್ಮಣ್ಯ ಮೇಳದಲ್ಲೇ ತಿರುಗಾಟ ಮಾಡಿ ಪುನಃ ಯಕ್ಷಗಾನದತ್ತ ಹೊರಳಿದರು . ನಂತರದಲ್ಲಿ ವೇಣೂರು ಮೇಳದಲ್ಲಿ 3 ವರ್ಷ , ಕಾವೂರು ಕೇಶವ ಶೆಟ್ಟಿಗಾರರ ನೇತೃತ್ವದ ಇರುವೈಲು ಮೇಳದಲ್ಲಿ 3 ವರ್ಷ , ಮಡಿಕೇರಿಯ ಚೌಡೇಶ್ವರಿ ಮೇಳದಲ್ಲಿ 3 ವರ್ಷ ತಿರುಗಾಟ ನಡೆಸಿದರು ‌.1974 ರ ಮಳೆಗಾಲದಲ್ಲಿ ಸುಪ್ರಸಿದ್ಧ ಬಣ್ಣದ ವೇಷಧಾರಿ ಗಾಂಧಿ ಮಾಲಿಂಗರ ಒತ್ತಾಯದಿಂದಾಗಿ ಭೀಮ ಭಟ್ಟರ ಯಕ್ಷಗಾನ ತಂಡಕ್ಕೆ ಸೇರಿ ಊರೂರು ಪ್ರದರ್ಶನ ನೀಡಿದರು . ಈ ಸಂದರ್ಭದಲ್ಲಿ ಕಟೀಲು ಮೇಳದ ಸುಪ್ರಸಿದ್ಧ ವೇಷಧಾರಿಗಳಾದ ಕೇದಗಡಿ ಗುಡ್ಡಪ್ಪ ಗೌಡರೂ ಭೀಮ ಭಟ್ಟರ ತಂಡದಲ್ಲಿದ್ದವರು , ರೈಗಳ ರಂಗದ ನಡೆ , ನಾಟ್ಯ ವಿಧಾನ ಎಲ್ಲಾ ಮೆಚ್ಚಿ "ಮುಂದಿನ ತಿರುಗಾಟದಲ್ಲಿ ಕಟೀಲು ಕ್ಷೇತ್ರದಿಂದ ಎರಡನೇ ಮೇಳ ಹೊರಡಲಿದೆ . ನೀನೂ ಸೇರು " ಎಂದು ಹೇಳಿ ರೈಗಳನ್ನು ಕಲ್ಲಾಡಿ ವಿಠಲ ಶೆಟ್ಟರ ಬಳಿ ಕರೆದೊಯ್ದರು .


ಶೀನಪ್ಪ ರೈಗಳು 1974 ರಲ್ಲಿ ಆ ವರ್ಷದ ತಿರುಗಾಟದಲ್ಲಿ ಕಟೀಲು ಒಂದನೇ ಮೇಳ ಸೇರಿದರು . ಆ ಕಾಲದಲ್ಲಿ ಕಟೀಲು ಒಂದನೇ ಮೇಳವು " ಇರಾ ಭಾಗವತರ ಮೇಳ " , ಎರಡನೇ ಮೇಳವು " ಬಲಿಪ ಭಾಗವತರ ಮೇಳ " ಎಂದೇ ಪ್ರಸಿದ್ಧಿಯಾಗಿತ್ತು . ಒಂದನೇ ಮೇಳದಲ್ಲಿ ಇರುವಾಗ ಕೇದಿಗಡಿ ಗುಡ್ಡಪ್ಪ ಗೌಡರು ಎದುರು ವೇಷಧಾರಿ ( ರಕ್ತಬೀಜನ ಪಾತ್ರ ) , ರೈಗಳು ಪೀಠಿಕೆ ವೇಷಧಾರಿ ( ದೇವೇಂದ್ರನ ಪಾತ್ರ ) ಆಗಿದ್ದರು . ಆದರೆ , ಎರಡು ತಿಂಗಳಲ್ಲೇ ಬಲಿಪರ ಮೇಳಕ್ಕೆ ಎದುರು ವೇಷಧಾರಿಯ ಅವಶ್ಯಕತೆ ಬಂದಾಗ ,ವಿಠಲ ಶೆಟ್ಟರು ರೈಯವರನ್ನು ಎರಡನೇ ಮೇಳಕ್ಕೆ ( ಬಲಿಪರ ) ವರ್ಗಾಯಿಸಿದರು . ಬಲಿಪರ ಮಾರ್ಗದರ್ಶನ , ರಂಗದ ನಡೆಯ ಮಾಹಿತಿ , ಸಲಹೆಯೊಂದಿಗೆ ಶೀನಪ್ಪ ರೈಗಳು ಕಟೀಲು ಎರಡನೇ ಮೇಳದಲ್ಲಿ ಮಿಂಚಿದರು . ವಿಠಲ ಶೆಟ್ಟರ ಹಾಗೂ ಬಲಿಪರ ದೂರ ದೃಷ್ಠಿಯಿಂದಾಗಿ ರೈಗಳಿಗೆ ಪ್ರಾಮುಖ್ಯ ಪಾತ್ರಗಳು ದೊರಕಿತು . ರೈಯವರ ರಕ್ತಬೀಜ‌ , ಹಿರಣ್ಯಾಕ್ಷ , ಇಂದ್ರಜಿತು , ಅರುಣಾಸುರ , ಕಾರ್ತವೀರ್ಯ , ಕೌಶಿಕ , ಅರ್ಜುನ , ಕರ್ಣ , ಭಾನುಕೋಪ , ಶಿಶುಪಾಲ , ಕೌರವ , ಬಲರಾಮ , ವಾಲಿ , ತಾಮ್ರಧ್ವಜ , ಭೀಮ , ವೀರಮಣಿ , ಕೌಂಡ್ಲೀಕ ಮುಂತಾದ ಪಾತ್ರಗಳು ವಿಜೃಂಭಿಸಲಾರಂಭಿಸಿತು . ಈ ಅವಧಿಯಲ್ಲಿ ಒಂದು ದಾಖಲಾರ್ಹ ಘಟನೆ ನಡೆಯಿತು . ಕಟೀಲು ಎರಡನೇ ಮೇಳದಲ್ಲಿ ಮಹಿಷಾಸುರನಾಗಿ ವಿಜೃಂಭಿಸಿದ ಬಣ್ಣದ ಕುಟ್ಯಪ್ಪುರವರು ನಿವೃತ್ತರಾದ ನಂತರ ಕುಂಞಣ್ಣ ಶೆಟ್ಟರು ಮಹಿಷಾಸುರ ಪಾತ್ರ ನಿರ್ವಹಿಸುತ್ತಿದ್ದರು . ಒಮ್ಮೆ ಕುಂಞಣ್ಣ ಶೆಟ್ಟರು ಅಸೌಖ್ಯರಾದರು . ಆ ಸಂದರ್ಭದಲ್ಲಿ ವಿಠಲ ಶೆಟ್ಟರ ಸೂಚನೆಯಂತೆ ಶೀನಪ್ಪ ರೈಯವರು ಮಹಿಷಾಸುರ ಪಾತ್ರ ಮಾಡಿ ನಂತರ ರಕ್ತಬೀಜನ ಪಾತ್ರವನ್ನೂ ಚೆನ್ನಾಗಿ ನಿರ್ವಹಿಸಿ ಯಕ್ಷಗಾನ ರಸಿಕರು ಹುಬ್ಬೇರಿಸುವಂತೆ ಮಾಡಿದ್ದರು . ಹೀಗೆ ಕಟೀಲು ಮೇಳದಲ್ಲಿ ನಿರಂತರ 33 ವರ್ಷಗಳ ತಿರುಗಾಟ ಮಾಡಿ ನಂತರ ಟಿ.ಶಾಮಭಟ್ಟರ ಪೋಷಕತ್ವದ ಎಡನೀರು ,ಹೊಸನಗರ , ಹನುಮಗಿರಿ ಮೇಳಗಳಲ್ಲಿ 12 ವರ್ಷ ತಿರುಗಾಟ ನಡೆಸಿದ್ದರು . ಶಾಮ ಭಟ್ಟರು ಸಂಪಾಜೆಯವರಿಗೆ ಅಪಾರವಾದ ಪ್ರೀತಿ , ಗೌರವ , ಪ್ರೋತ್ಸಾಹ ನೀಡುತ್ತಿರುವುದಾಗಿ ರೈಗಳು ಒಂದು ವರ್ಷದ ಹಿಂದೆ ನನ್ನಲ್ಲಿ ತಿಳಿಸಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ . ಕಳೆದ ವರ್ಷ ರೈಗಳು ಯಕ್ಷರಂಗದಿಂದ ನಿವೃತ್ತರಾಗಿದ್ದರು .
ಸಂಪಾಜೆ ಶೀನಪ್ಪ ರೈಯವರಿಗೆ ಅಂದಿನ ಕಾಲದಲ್ಲಿ , ಅಂದರೆ 1975 - 1980 ರಲ್ಲಿ ಅತ್ಯಂತ ಹೆಸರು ತಂದ ಪಾತ್ರ ಅಂದರೆ " ಹಿರಣ್ಯಾಕ್ಷ " . ಅಂದಿನ ಕಾಲದಲ್ಲಿ ಶ್ರೀ ದೇವಿಮಹಾತ್ಮೆ ಪ್ರಸಂಗವು ಈಗಿನಷ್ಟು ಪ್ರಮಾಣದಲ್ಲಿ ಜರುಗುತ್ತಿರಲಿಲ್ಲ . " ಅತಿಕಾಯ -ಇಂದ್ರಜಿತು - ಮೈರಾವಣ " , ತ್ರಿಜನ್ಮ ಮೋಕ್ಷ , ಶ್ರೀಕೃಷ್ಣ ಲೀಲೆ , ಚತುರ್ಜನ್ಮ ಮೋಕ್ಷ , ಸಮಗ್ರ ವಾಲಿ , ಸಮಗ್ರ ರಾವಣ ಇಂತಹ ಪ್ರಸಂಗಗಳೇ ಚಾಲ್ತಿಯಲ್ಲಿತ್ತು . ತ್ರಿಜನ್ಮ ಮೋಕ್ಷ ಪ್ರಸಂಗ ಬಂದಾಗ ಸಂಪಾಜೆಯವರಿಗೇ ಹಿರಣ್ಯಾಕ್ಷ . ಇದು ಎರಡನೇ ಮೇಳದಲ್ಲಿ ಮಾತ್ರವಲ್ಲ ,ಒಂದನೇ ಮೇಳದವರದ್ದು ತ್ರಿಜನ್ಮ ಮೋಕ್ಷ ಪ್ರಸಂಗವಾದರೆ , ರೈಗಳು ಒಂದನೇ ಮೇಳಕ್ಕೆ ಹಿರಣ್ಯಾಕ್ಷ ಪಾತ್ರ ನಿರ್ವಹಿಸಲು ಹೋಗಬೇಕಾಗಿತ್ತು . ಹಿರಣ್ಯಾಕ್ಷ ಪಾತ್ರ ರೈಗಳನ್ನು ಅಷ್ಟು ಪ್ರಸಿದ್ಧಿಯನ್ನಾಗಿ ಮಾಡಿತ್ತು . ಶೀನಪ್ಪ ರೈಗಳನ್ನು ನನ್ನ ಮಿತ್ರರಾದ ಗಿರಿಧರ್ ನಾಯಕರು 2015 ರಲ್ಲಿ ಮೂಡುಬಿದಿರೆ ಸಮೀಪದ ಮಿತ್ತಬೈಲಿನಲ್ಲಿ ಹೊಸನಗರ ಮೇಳದ ವೇದಿಕೆಯಲ್ಲಿ ಸಂಮಾನ ಮಾಡಿದಾಗ , ಅವರ ಅಭಿನಂದನಾ ಭಾಷಣದಲ್ಲಿ ನಾನು ಈ ಅಂಶವನ್ನು ಉಲ್ಲೇಖಿಸಿದಾಗ , ಸಂಪಾಜೆಯವರು ,
" ಅಣ್ಣೆರೇ , ಉಂದು ಮಾತಾ ಈರೆಗ್ ನನಲಾ ನೆಂಪು ಉಂಡತ್ತೇ ? ಇತ್ತೆದಕ್ಲೇಗ್ ಏರೆಗ್ಲಾ ಈ ವಿಷೊಯೊನೇ ಗೊತ್ತುಜ್ಜಿ . ಉಂದೇನ್ ಯಾನ್ಲಾ ಮದೆತಿತ್ತೆ . ಇನಿ ನೆಂಪು ಮಲ್ತರ್ " ಎಂದು ನನ್ನಲ್ಲಿ ಮುಗ್ದತೆಯಿಂದಲೇ ಹೇಳಿದ್ದರು . ನನ್ನೊಂದಿಗೆ ಆತ್ಮೀಯರಾಗಿದ್ದ ರೈಗಳು ನಾನು ಹನುಮಗಿರಿ ಮೇಳದ ಚೌಕಿಗೆ ಹೋದಾಗ ಅತ್ಯಂತ ವಿನೀತರಾಗಿ ಮಾತಾಡಿಸುತ್ತಿದ್ದರು . ಒಮ್ಮೆ ಮಳೆಗಾಲದ ಪ್ರದರ್ಶನಕ್ಕೆ ಮೂಡಬಿದಿರೆಗೆ ಬಂದಾಗ ,
" ಅಣ್ಣೆರೇ , ಎಂಕ್ ಈರ್ನ ಇಲ್ಲಾಗ್ ಬರೋಡು " ಎಂದಾಗ ಅವರನ್ನು ನನ್ನ ಮನೆಗೆ ಕರೆದು ಸತ್ಕರಿಸಿದಾಗ ನನ್ನ ಪತ್ನಿಯಲ್ಲಿ ,
" ಅಮ್ಮ , ಮೇರ್ ಯಕ್ಷೊಗಾನೊಗು ಬೋಡಾದ್ ಮಸ್ತ್ ಬೆನ್ತಿನಾರ್ . ನಿಕ್ಲೆಗ್ ದೇವೆರ್ ಎಡ್ಡೆನೇ ಮಲ್ಪುವೆರ್ ಆವೇ " ಎಂದು ಹರಸಿದ್ದರು .
ರೈಗಳು ಪರಂಪರೆಯ ನಾಟ್ಯವಿಧಾನ ಅರಿತವರು . ಪ್ರತೀ ಪಾತ್ರದ ಪ್ರವೇಶ , ರಂಗ ವಿಧಾನ ಇವೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿದ್ದರು . ಹಿತ ಮಿತವಾದ ಮಾತುಗಾರಿಕೆಯಾದರೂ , ಅದರಲ್ಲಿ ಭಾಷಾ ಶುದ್ಧಿಯಿತ್ತು .
ಅರ್ಥಗಾರಿಕೆಯಲ್ಲಿ‌ ಆಯಾಯ ಪದ್ಯದ ರಸಭಾವವನ್ನು ಅರಿತು ಶ್ರುತಿಬದ್ಧವಾಗಿಯೇ ಸಂಭಾಷಣೆ ನಡೆಸುವ ಕೌಶಲ್ಯವಿತ್ತು . ದೀರ್ಘ ಮಾತುಗಾರಿಕೆ ಅಲ್ಲದಿದ್ದರೂ , ಪಾತ್ರಗಳು ಹೇಳಬೇಕಾದ ಯಾವುದೇ ಅಂಶಗಳನ್ನೂ , ಪದ್ಯದ ಪರಿಧಿಯಲ್ಲೇ ಒಂದಿನಿತೂ ಬಿಡದೇ ಪ್ರೇಕ್ಷಕರಿಗೆ ತಲುಪಿಸುವ ಚಾಕಚಕ್ಯತೆಯಿತ್ತು . ವಾದಕ್ಕೆ ನಿಂತರಂತೂ ಅಂದಿನ ಯಕ್ಷಗಾನ ಪ್ರದರ್ಶನದ ವೈಖರಿಯೇ ಬದಲಾಗುತ್ತಿತ್ತು . ಪುರಾಣಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಸಾಹಿತ್ಯ ಜ್ಞಾನವಿತ್ತು . ಸಂಪಾಜೆಯವರ ಕಲಾ ಪ್ರತಿಭೆಯನ್ನು ಲಕ್ಷಿಸಿ ಹಲವಾರು , ಪ್ರಶಸ್ತಿ , ಪುರಸ್ಕಾರ. ಸಂಮಾನಗಳು ಲಭಿಸಿವೆ . " ಕರ್ನಾಟಕ ರಾಜ್ಯ ಪ್ರಶಸ್ತಿ " , ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ಪ್ರಶಸ್ತಿ ಸಹಿತ ನೂರಾರು ಸಂಮಾನಗಳನ್ನು ಅರ್ಹವಾಗಿ ಪಡಿದಿದ್ದಾರೆ .
ಸಂಪಾಜೆಯವರಿಗೆ ಎಂಟು ವರ್ಷಗಳ ಹಿಂದೆಯೇ ಆರೋಗ್ಯದ ಸಮಸ್ಯೆ ಇದ್ದು , ಆಗ ಡಾ.ಪದ್ಮನಾಭ ಕಾಮತರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಾಗ , ಡಾ . ಕಾಮತರು ಅದಕ್ಕೆ ಸಂಬಂಧಪಟ್ಟ ವೈದ್ಯರನ್ನು ಸೂಚಿಸಿದ್ದರು .ಆಗ ನಿವೃತ್ತಿಯ ಯೋಚನೆಯನ್ನೂ ಮಾಡಿದ್ದರು . ಆದರೂ , ತಮ್ಮ ಮನೋಧೈರ್ಯದಿಂದಾಗಿ ಸುಧಾರಿಸಿಕೊಂಡು ಮುಂದೆಯೂ ಏಳೆಂಟು ವರ್ಷಗಳ ತಿರುಗಾಟಗಳನ್ನು ಮಾಡಿ , ತಮ್ಮ ಕ್ಷಮತೆ ತೋರಿದ್ದರು . ಇತ್ತೀಚೆಗೆ ಕಾಲಿನ ನರಗಳಿಗೆ ರಕ್ತ ಸಂಚಾರದ ವ್ಯತ್ಯಯ ಉಂಟಾಗಿತ್ತು . ನಿನ್ನೆ ತಮ್ಮ ಮಗನಾದ ಜಯರಾಮ ರೈಯವರಲ್ಲಿ ತಮಗೆ ಡಾ.ಪದ್ಮನಾಭ ಕಾಮತರಲ್ಲಿ ಕರೆದೊಯ್ಯಲು ತಿಳಿಸಿದ್ದರಂತೆ . ಡಾ.ಕಾಮತರು ಹೃದ್ರೋಗ ತಜ್ಞರಾಗಿದ್ದು , ರೈಯವರಿಗೆ ಹೃದಯದ ಸಮಸ್ಯೆ ಇರಲಿಲ್ಲ . ಆದರೂ , ರೈಯವರ ಅಪೇಕ್ಷೆಯಂತೆ ಅವರನ್ನು ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯ್ದಿದ್ದರು . ಡಾ.ಕಾಮತರನ್ನು ಕಂಡು ಮುಗುಳ್ನಕ್ಕು ವಂದಿಸಿದ್ದರು . ಡಾ.ಕಾಮತರೂ ಅವರಿಗೆ ವಂದಿಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸಂಬಂಧಪಟ್ಟ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು . ಆದರೂ , ಇಂದು ಮುಂಜಾನೆ ರೈಯವರು ಇಹಲೋಕ ತ್ಯಜಿಸಿದ್ದುದು ಯಕ್ಷರಂಗದ ದುರಂತಗಳಲ್ಲೊಂದು .
ಸಂಪಾಜೆಯವರು ಇತ್ತೀಚೆಗೆ ಸಂಪಾಜೆಯಿಂದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ತಮ್ಮ ಮಗ ಜಯರಾಮ ರೈಯವರ ಮನೆಯಲ್ಲಿ ವಾಸಿಸುತ್ತಿದ್ದರು . ಧರ್ಮಪತ್ನಿ ಶ್ರೀಮತಿ ಗಿರಿಜಾವತಿ , ಸುಪುತ್ರ ಜಯರಾಮ ರೈ , ಪುತ್ರಿಯರಾದ ರೇವತಿ ಶೆಟ್ಟಿ , ರಜನಿ ರೈಯವರನ್ನೂ , ಅಪಾರ ಬಂಧುಬಳಗ ಸಹಿತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ . ರೈಯವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .




19
2 shares
Like
Comment
Share
Share on :

SUDDI

 

Copyright © 2011 Tuluworld - All Rights Reserved