Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಬಲೀಂದ್ರ ಲೆಪ್ಪು – ಸರಿ ತಪ್ಪು!

ದೀಪಾವಳಿಯ ಮರುದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತಿದೆ. ಆ ದಿನ ಸಂಜೆ ಕೃಷಿಕರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ಒಂದು ಉದ್ದ ಕೋಲು ನೆಟ್ಟು ಅದಕ್ಕೆ ಎರಡು ಅಡ್ಡ ಕೋಲು ಕಟ್ಟಿ ಅದನ್ನು ಕಾಡು ಹೂಗಳಿಂದ ಸಿಂಗರಿಸಿ ಅದನ್ನು ಪೂಜಿಸಿ, ಅಕ್ಕಿ ಹಾರಿಸಿ ತುಳು ಪದಗಳ ಮೂಲಕ ತಮ್ಮ ನೆಚ್ಚಿನ ರಾಜ ಬಲೀಂದ್ರನನ್ನು ಕರೆಯುತ್ತಾರೆ. ಇದಕ್ಕೆ“ಬಲೀಂದ್ರ ಲೆಪ್ಪು” ಎಂದು ತುಳುವರು ಕರೆಯುತ್ತಾರೆ. ವಿಚಿತ್ರವೆಂದರೆ ತುಳುವರು ಬಲೀಂದ್ರನನ್ನು ತುಳುವಿನಲ್ಲಿ ಕರೆಯಲು ಬಳಸುವ ಪದಗಳನ್ನು ಕನ್ನಡದಲ್ಲಿ ತರ್ಜಮೆ ಮಾಡಿದಾಗ ಅದರ ವಿಚಿತ್ರ ಅರ್ಥ ಏನಾಗುತ್ತದೆ ಗೊತ್ತೇ?  “ಬಲೀಂದ್ರ ನೀನು ಬರುವುದೇ ಬೇಡ” ಎಂದು ಹೇಳಿದಂತೆ ಆಗುತ್ತದೆ. ಯಾಕೆಂದರೆ ಪ್ರಕೃತಿಯಲ್ಲಿ ಎಂದೂ ಸಾಧ್ಯವಾಗದ ವಿಷಯಗಳನ್ನು ಉಲ್ಲೇಖಿಸಿ, “ಅದು ಸಾಧ್ಯವಾದಾಗ ಮಾತ್ರ ನೀನು ಬಾ ಬಲೀಂದ್ರ” ಎಂದು ಒಳ ಅರ್ಥದಲ್ಲಿ ಹೇಳಿದಾಗ ಬಲೀಂದ್ರ ಬರಲು ಹೇಗೆ ಸಾಧ್ಯ? ಈ ವಿಶಿಷ್ಟ ಅರ್ಥದ ಬಲೀಂದ್ರ ಲೆಪ್ಪು ಹೀಗಿದೆ ಗಮನಿಸಿ:
ಕಗ್ಗಲ್ ಕಾಯಿ ಪೊನಗ (ಕರಿಕಲ್ಲು ಹಣ್ಣುಕಾಯಿ ಕೊಡುವಾಗ),
ಬೊಲ್ಲುಕಲ್ ಪೂ ಪೊನಗ (ಬಿಳಿಕಲ್ಲು ಹೂ ಬಿಡುವಾಗ),
ಉಪ್ಪು ಕರ್ಪೂರ ಆನಗ (ಉಪ್ಪು ಕರ್ಪೂರ ಆಗುವಾಗ),
ಜಾಲ್ ಪಾದೆ ಆನಗ (ಅಂಗಳದ ಮಣ್ಣು ಬಂಡೆಕಲ್ಲು ಆಗುವಾಗ),
ಅಲೆಟ್ ಬೊಲ್ನೆಯಿ ಮುರ್ಕುನಗ (ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ),
ಗೊಡ್ಡೆಮ್ಮೆ ಗೋಣೆ ಅನಗ (ಗೊಡ್ಡು ಎಮ್ಮೆ ಕೋಣ ಆಗುವಾಗ),
ಏರು ದಡ್ಡೆ ಆನಗ (ಕೋಣ ಮಂಗ ಆಗುವಾಗ),
ಉರ್ದು ಮದ್ದೋಲಿ ಆನಗ (ಉದ್ದಿನ ಬೇಳೆ ಮದ್ದಳೆ ಆಗುವಾಗ),
ನೆಕ್ಕಿದಡಿಟ್ ಆಟ ಆನಗ (ನೆಕ್ಕಿಯ ಮರದಡಿ ಯಕ್ಷಗಾನ ಆಟ ಆಗುವಾಗ),
ತುಂಬೆದಡಿಟ್ ಕೂಟ ಆನಗ (ತುಂಬೆ ಗಿಡದ ಅಡಿ ಸಭೆ ಆಗುವಾಗ),
ದಂಬೆಲ್ಗ್ ಪಾಂಪು ಪಾಡುನಗ (ಗದ್ದೆಯ ದಂಡೆಗೆ ಕಾಲು ಸೇತುವೆ ಹಾಕುವಾಗ),
ದಂಟೆದಜ್ಜಿ ಮದ್ಮಲ್ ಆನಗ (ಮುದಿ ಅಜ್ಜಿ ಮೈ ನೆರೆದಾಗ),
ಗುರ್ಗುಂಜಿದ ಕಲೆ ಮಾಜಿನಗ (ಗುಲಗಂಜಿಯ ಕಲೆ ಮಾಸಿದಾಗ),
ನಿನ್ನ ಊರು ನಿನ್ನ ಸೀಮೆ ಆಳಿಯರೆ ಓರ ಬತ್ತ್ ಪೋ ಬಲೀಂದ್ರ! 
(ನಿನ್ನ ಊರು ನಿನ್ನ ರಾಜ್ಯ ಆಳಲು ಒಮ್ಮೆ ಬಂದು ಹೋಗು ಬಲೀಂದ್ರ) ಕೂ.. ಕೂ.. ಕೂ..,

ಕಲ್ಲಬಸವೆ ಮುಕ್ಕುರು ದಕುನಗಾ (ಕಲ್ಲಿನ ಬಸವ ಭುಸುಗುಡುವಾಗ),
ಕಲ್ಲಕೊರಿ ಕೆಲೆಪುನಗ (ಕಲ್ಲಿನ ಕೋಳಿ ಕೂಗುವಾಗ),
ಮಂಜಲ್ ಪಕ್ಕಿ ಮೈ ಪಾಡ್ನಗ (ಅರಿಶಿನ ಹಕ್ಕಿ ಕಣ್ಣಿಗೆ ಕಾಡಿಗೆ ಹಚ್ಚಿದಾಗ),
ಕೊಟ್ರುಂಜೆ ಕೊಡಿ ಎರ್ನಾಗಾ, ಆ ಊರ ಪೊಲಿ ಕನಲ ಈ ಊರ ಬಲಿ ಕೊನೊಲ, ಬಲ ಬಲೀಂದ್ರ!  

ಅರಕುದ ಒಟ್ಟೆ ಓಡೊಡು (ನೀರಲ್ಲಿ ಕರಗುವ ಅರಗಿನ ಒಡಕು ದೋಣಿಯಲ್ಲಿ ಕುಳಿತು),
ಮಯಣದ ಮೊಂಟು ಜಲ್ಲಡು (ಮೇಣದ ಗಿಡ್ಡ ಹುಟ್ಟಿನಿಂದ ನೀರನ್ನು ಜಲ್ಲುತ್ತಾ),
ಕೊಟ್ಟುಗು ಗೊಂಡೆ ಪೂ ಕಟುದು (ಸಲಿಕೆಗೆ ಗೊಂಡೆ ಹೂ ಕಟ್ಟಿ),
ಪೊಟ್ಟು ಗಟ್ಟಿ, ಪೊಡಿ ಬಜಿಲು ಗೆತೋನ್ಯರೆ ಬಲ ಬಲೀಂದ್ರ (ಸಪ್ಪೆ ಗಟ್ಟಿ, ಒಣ ಅವಲಕ್ಕಿ ತಿನ್ನಲು ಬಾ ಬಲೀಂದ್ರ!) ಕೂ... ಕೂ... ಕೂ... 
ಎಂದು ಹೇಳಿ ಅಕ್ಕಿ ಹಾರಿಸಿ ಬಲೀಂದ್ರನನ್ನು ಕರೆಯುತ್ತಾರೆ ತುಳುವರು. ಇಲ್ಲಿಗೆ ಬಲೀಂದ್ರನ ಪೂಜೆ ಸಂಪನ್ನವಾಗುತ್ತದೆ.

ಪ್ರಕೃತಿಯ ನಿಯಮದ ಪ್ರಕಾರ ಸಾಧ್ಯವೇ ಇಲ್ಲದ ಮೇಲಿನ ಕೆಲವು ಸಂಗತಿಗಳನ್ನು ಉಲ್ಲೇಖಿಸಿ, ಅದು ಸಾಧ್ಯವಾದಾಗ ಮಾತ್ರ ಬಾ ಎಂದು ಬಲೀಂದ್ರನನ್ನು ಕರೆದರೆ ಅವನು ಬರುವುದು ಸಾಧ್ಯವೇ? ಕಲ್ಲು ಎಂದಾದರೂ ಹೂ ಬಿಡುವುದೇ? ಶಿಲೆ ಹಣ್ಣುಕಾಯಿ ಕೊಡುವುದೇ?  ತಮ್ಮ ಮನೆಗೆ ಬರುವ ಗೌರವಾನ್ವಿತ ಅತಿಥಿಗಳಿಗೆ ಸಪ್ಪೆ ಗಟ್ಟಿ ಅಥವಾ ಒಣ ಅವಲಕ್ಕಿಯಂತಹಾ ರುಚಿಯಿಲ್ಲದ ತಿಂಡಿಗಳನ್ನು ಕೊಟ್ಟು ಯಾರಾದರೂ ಅವಮಾನಿಸುತ್ತಾರೆಯೇ?  ನೀರಲ್ಲಿ ಕರಗುವ ಅರಗಿನ ಒಡಕು ದೋಣಿಯಲ್ಲಿ ಕುಳಿತು, ಮೃದು ಮೇಣದ ಕೋಲಿಂದ ಹುಟ್ಟು ಹಾಕುತ್ತಾ ಬರಲು ಬಲೀಂದ್ರನಿಗೆ ಹೇಳುವುದು ಅವನು ನಡು ನೀರಲ್ಲಿ ಮುಳುಗಿ ಸಾಯಲಿ ಎಂಬ ಕೆಟ್ಟ ಉದ್ದೇಶದಿಂದ ಇರಬಹುದೇ?
ಬಹುಶ ಬಲೀಂದ್ರನ ಕಟ್ಟಾ ವೈರಿಗಳಾದ ಈಗಿನ ಮರಿ-ವಾಮನರು ಈ ತುಳುವಿನ ‘ಬಲೀಂದ್ರ ಲೆಪ್ಪು’ ಪದಗಳನ್ನು ತಿರುಚಿ ಉಲ್ಟಾ ಅರ್ಥ ಕೊಟ್ಟಿರಬಹುದು ಎಂದೆನಿಸುತ್ತದೆ. ಕವಿಗಳು ಅಲಂಕಾರಿಕ ರೂಪಕದಲ್ಲಿ ಕೆಲವೊಮ್ಮೆ ಹೇಳುತ್ತಾರೆ- ಮಹಾತ್ಮರು ಬರುವಾಗ ಕಲ್ಲರಳಿ ಹೂವಾಗುತ್ತದೆ, ಒಣ ಮರ ಚಿಗುರುತ್ತದೆ, ಋತುವಲ್ಲದ ಋತುವಲ್ಲಿ ಮರ ಹಣ್ಣು ಕೊಡುತ್ತದೆ, ಕಲ್ಲಿನ ಬಸವ ಕುಣಿಯುತ್ತದೆ, ಮುಂತಾದ ರೂಪಕಗಳನ್ನು ಬಳಸುತ್ತಾರೆ. ಅದೇ ರೀತಿ ಬಲೀಂದ್ರ ಬರುವ ಶುಭ ಗಳಿಗೆಯಲ್ಲಿ ತುಳುನಾಡಿನ ಕಲ್ಲುಗಳು ಅರಳಿ ಹೂವಾಗುತ್ತವೆ, ಅಕಾಲ ಋತುವಲ್ಲಿ ಮರಗಳು ಹಣ್ಣು ಕಾಯಿ ಕೊಡುತ್ತವೆ, ಋತು ನಿಯಮಕ್ಕೆ ವಿರುದ್ಧವಾದ ಶುಭ ಸಂಕೇತಗಳಾಗುತ್ತವೆ, ಎಂದು ಹೇಳುವ ಉದ್ದೇಶದಿಂದ ಕಟ್ಟಿದ ತುಳು ಪದಗಳನ್ನು ಯಾರೋ ಕೆಲವರು ಕೇವಲ ವಾಕ್ಯದ ಕೊನೆಯ ಕ್ರಿಯಾಪದಗಳನ್ನು ಮಾತ್ರ ಬದಲಿಸಿ ಋಣಾತ್ಮಕ ಅರ್ಥ ಬರುವಂತೆ ತಿರುಚಿರಬಹುದು ಅನಿಸುತ್ತದೆ. ಉದಾಹರಣೆಗೆ: ಬಲೀಂದ್ರೆ ಬನ್ನಗ- ಕಗ್ಗಲ್ ಕಾಯಿ ಕೊರ್ಪುಂಡು, ಬೊಲ್ಲುಕಲ್ ಪೂ ಬುಡುಪುಂಡು, ಉಪ್ಪು ಕರ್ಪೂರ ಅಪುಂಡು, ಅಲೆಟ್ ಬೊಲ್ನೆಯಿ ಮುರ್ಕುಂಡು, ದಂಟೆದಜ್ಜಿ ಖುಷಿಟ್ ಜವಂದಿ ಆಪಲು, ಕಲ್ಲ ಬಸವೆ ನಲಿಪುವೆ, ಎನ್ನುವ ಪದಗಳನ್ನು ಬಳಸಿದರೆ, ಆಗ ಪವಿತ್ರ ಬಲೀಂದ್ರನ ಆಗಮನ ಕಾಲಕ್ಕೆ ಕರಿಕಲ್ಲೇ ಅರಳಿ ಹೂವಾಗುತ್ತದೆ, ಶಿಲೆ ಹಣ್ಣು ಕೊಡುತ್ತದೆ, ಒಣಗಿದ ಮರಗಳು ಚಿಗುರುತ್ತವೆ, ಇಡೀ ಪ್ರಕೃತಿಯೇ ಸಂಭ್ರಮದಿಂದ ಶೃಂಗಾರಗೊಂಡು ಬಲೀಂದ್ರನ ಸ್ವಾಗತಕ್ಕೆ ಸಿದ್ದವಾಗುತ್ತದೆ ಎನ್ನುವ ಧನಾತ್ಮಕ ಅರ್ಥ ಬರುತ್ತದೆ. ಇವು ಸರಿಯಾದ ಉಪಮೆಗಳು. ಈ ಬಾರಿ ಪಾಡ್ಯಮಿಯಂದು ಸಂಜೆ ಬಲೀಂದ್ರನನ್ನು ಕರೆಯುವಾಗ ತುಳುವರು ಈ ವಿಷಯದಲ್ಲಿ ಸ್ವಲ್ಪ ಆಲೋಚಿಸಲಿ.
ಬಲೀಂದ್ರನು ಕೃಷಿಕರ ಪ್ರೀತಿಯ ರಾಜ. ಹಾಗಾಗಿ ಕೃಷಿಗೆ ಸಂಬಂಧ ಪಟ್ಟ ಸಾಧನ ಸಲಕರಣೆಗಳು ಮತ್ತು ಜಾನುವಾರುಗಳು ದೀಪಾವಳಿ ಮತ್ತು ಪಾಡ್ಯಮಿಯಂದು ಪೂಜೆಗೊಳ್ಳುತ್ತವೆ. ಆದರೆ ಈಗಿನ ತುಳುನಾಡಿನ ವಿಷಮ ಸ್ಥಿತಿ ಏನೆಂದರೆ ಇಲ್ಲಿಯ ಹೆಚ್ಚಿನ ಕೃಷಿ ಭೂಮಿಗಳು ಈಗ ಪಡಿಲು ಬಿದ್ದಿವೆ. ಕಾರ್ಮಿಕರ ಕೊರತೆ ಅಥವಾ ಅಡಿಕೆ ಕೃಷಿಯೊಂದನ್ನು ಹೊರತುಪಡಿಸಿ ಬೇರೆ ಕೃಷಿಯಲ್ಲಿ ಅದಾಯಕ್ಕಿಂತ ಖರ್ಚು ಹೆಚ್ಚು ಆಗುತ್ತದೆ ಎಂಬ ನೆಪದಿಂದ ಗುತ್ತು ಬರ್ಕೆಯವರೆಲ್ಲಾ ತಮ್ಮ ಹೊಲ ಗದ್ದೆಗಳನ್ನು ಪಡಿಲು ಬಿಟ್ಟಿದ್ದಾರೆ. ಇವರ ಜೀವನಾಧಾರಕ್ಕೆ ಪರವೂರಿನಲ್ಲಿ ಇರುವ ಇವರ ಮಕ್ಕಳು ನಿಯಮಿತ ಹಣ ಕಳುಹಿಸುತ್ತಾರೆ, ಹಾಗಾಗಿ ಹೊಟ್ಟೆಪಾಡಿನ ಯಾವುದೇ ಚಿಂತೆ ಇವರಿಗಿಲ್ಲ. ಗುತ್ತಿನ ಮನೆಗಳೆಲ್ಲಾ ಭೂತ ಬಂಗಲೆಗಳಾಗಿವೆ, ಕೃಷಿಗೆ ಸಂಬಂಧಪಟ್ಟ ಯಾವುದೇ ಸಲಕರಣೆಗಳು ಮನೆಯಲ್ಲಿ ಇಲ್ಲ, ಜಾನುವಾರುಗಳ ಕೊಟ್ಟಿಗೆ ಕಾರು ನಿಲ್ಲಿಸುವ ಗರಾಜ್ ಆಗಿದೆ, ಮನೆಯ ಸುತ್ತಲಿನ ಗದ್ದೆಗಳಲ್ಲಿ ಹುಲ್ಲು ಗಿಡಗಂಟಿಗಳು ಬೆಳೆದು ವಿಷ ಜಂತುಗಳಿಗೆ ಮನೆಯಾಗಿವೆ. ಹಾಗಿರುವಾಗ ಯಾವ ಕೃಷಿ ಸಂಬಂಧಿತ ವಸ್ತುಗಳನ್ನು & ಜಾನುವಾರುಗಳನ್ನು ನೋಡಿ ಹರಸಲು ಬಲೀಂದ್ರ ತುಳುನಾಡಿಗೆ ಬರಬೇಕು? ಈಗಿನ ಕೃಷಿಕರ ಮನೆಯ ಭೂತ-ದೈವಗಳಿಗೆ ದಿನಾಲೂ ಬಾಜೆಲ್-ನೀರು ಇಡುವವರೂ ಇಲ್ಲ. ಹೆಚ್ಚಿನ ಗುತ್ತಿನವರು ನಗರದಲ್ಲಿ ಫ್ಲಾಟ್ ಮಾಡಿ ಆರಾಮವಾಗಿದ್ದಾರೆ. ಆದರೂ ನಾವು “ಒಕ್ಕೆಲಕುಲು” ( ಒಕ್ಕಲಿಗರು) ಎಂದು ಬಡಾಯಿ ಕೊಚ್ಚುವುದನ್ನು ಮಾತ್ರ ಬಿಟ್ಟಿಲ್ಲ. ಇಂತಹವರು ದೀಪಾವಳಿ-ಪಾಡ್ಯಮಿಯಂದು ವರ್ಷಕ್ಕೆ ಎರಡು ದಿನ ಹಿರಿಯರ ಮನೆ (ಭೂತ್ ಬಂಗ್ಲಾ) ತೆರೆದು ಸ್ವಚ್ಛ ಮಾಡಿ ‘ಪರ್ಬ’ ಆಚರಿಸಿ, ಪಡಿಲು ಬಿದ್ದ ಗದ್ದೆಯ ಬದಿಗೆ “ಬಲಿ-ಮರ” ಸ್ಥಾಪಿಸಿ ಪೂಜಿಸಿ, ತಿರುಪತಿ ಪಣವು-ಹುಂಡಿಯಲ್ಲಿ ಬಿಡಿಕಾಸು ಹಾಕಿದಾಕ್ಷಣ ಕೃಷಿರಾಜ ಬಲೀಂದ್ರ ಮೆಚ್ಚುವನೇ? (ತಿರುಪತಿಯ ಬಾಲಾಜಿ ಮೂಲತಃ “ಬಲಿಜೀ” ಅರ್ಥಾತ್ ಬಲೀಂದ್ರ). 
ರೈತಪ್ರಿಯ ಬಲೀಂದ್ರ ಕೈಯಲ್ಲಿ ಕೇವಲ ನೇಗಿಲು ಹಿಡಿದು ಬರುತ್ತಾನೆಯೇ ಹೊರತು ಅವನು ಕೈಯಲ್ಲಿ ವೈದಿಕ ದೇವರಂತೆ ಭೀಕರ ಅಸ್ತ್ರ ಶಸ್ತ್ರ ಹಿಡಿದು ಯುದ್ಧಕ್ಕೆ ಹೊರಟವನಂತ ತಾಮಸಿಕ ಭಂಗಿಯಲ್ಲಿ ಬರುವುದಿಲ್ಲ.  
ತುಳುನಾಡಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಒಬ್ಬನ ಹೆಸರಾದರೂ “ಮಹಾಬಲ” ಎಂದಿರುತ್ತದೆ. ಮಹಾಬಲ ಎಂದರೆ ಬಲಿ ಚಕ್ರವರ್ತಿ. (ಶಿವನನ್ನು ಮಹಾಬಲ ಎಂದು ಕರೆಯಲಾಗುತ್ತದೆ ಎಂಬ ತಪ್ಪು ತಿಳುವಳಿಕೆ ಕೆಲವರಲ್ಲಿ ಇರುವಂತಿದೆ). ಹಿಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ಮಹಾಬಲ ಎಂಬ ಹೆಸರೇ ತುಳುವ ಸಂಸ್ಕೃತಿಯಲ್ಲಿ ಬಲಿ ಚಕ್ರವರ್ತಿಗೆ ಇದ್ದ ಮಹತ್ವ ಮತ್ತು ಜನಪ್ರಿಯತೆಯನ್ನು ಸೂಚಿಸುತ್ತದೆ. ಆದರೆ ಈಗ ವೈಷ್ಣವ ಬ್ರಾಹ್ಮಣರು ಸ್ಪರ್ಧೆಗೆ ಬಿದ್ದು ಅಸುರ ರಾಜ ಬಲಿಚಕ್ರವರ್ತಿಗೆ ಎದುರಾಗಿ ವಾಮನ ಎಂಬ ಕುಳ್ಳ ದೇವರನ್ನು ಬಲಿಪಾಡ್ಯಮಿಯಂದು ಅವರವರ ಮನೆಯಲ್ಲಿ ಪೂಜಿಸುವ ಪದ್ದತಿ ಹುಟ್ಟು ಹಾಕಿದ್ದಾರೆ. ಎಲ್ಲದರಲ್ಲೂ ಬ್ರಾಹ್ಮಣರನ್ನು ಕುರುಡಾಗಿ ಅನುಸರಿಸುವ ತುಳುವ ಶೂದ್ರರೆಲ್ಲಾ ಮುಂದೊಮ್ಮೆ ತಮ್ಮ ಮನೆಯಲ್ಲೂ ಬಲೀಂದ್ರ ಪೂಜೆಯನ್ನು ನಿಲ್ಲಿಸಿ ವಾಮನ ಪೂಜೆ ಸುರು ಮಾಡಿದರೆ ಆಶ್ಚರ್ಯವಿಲ್ಲ.
(ಕೇರಳ ಹಾಗೂ ತುಳುನಾಡಿನ ವಿಶಿಷ್ಟ ಕೃಷಿಕ ಸಂಸ್ಕೃತಿಯ ಪರಿಚಯವೇ ಇಲ್ಲದ ಸಂಕುಚಿತ ದೃಷ್ಟಿಯ ಅಮಿತ್ ಶಾ ಕಳೆದ ವರ್ಷ ಕೇರಳಿಯರಿಗೆ ಹಾಗೂ ತುಳುವರಿಗೆ ಕೊಟ್ಟ ಸಲಹೆ ಏನೆಂದರೆ- ಅಸುರ ಕುಲದ ಬಲೀಂದ್ರನನ್ನು ಹಿಂದೂಗಳು ಪೂಜಿಸುವುದು ವರ್ಜ್ಯ, ಹಾಗಾಗಿ ದಕ್ಷಿಣ ಭಾರತೀಯರು ವೈದಿಕ ದೇವರಾದ ವಾಮನನ್ನು ಓಣಂ ಮತ್ತು ಬಲಿಪಾಡ್ಯಮಿಯಂದು ಪೂಜಿಸಬೇಕು ಎಂಬುದಾಗಿ. ಇದಕ್ಕೆ ಕೇರಳಿಯರು ಪ್ರತಿಭಟಿಸಿದರು, ಆದರೆ ತುಳುವರು ಪ್ರತಿಭಟಿಸಲೇ ಇಲ್ಲ!).      
 ✍️ ಪ್ರವೀಣ್. ಎಸ್  ಶೆಟ್ಟಿ. ಕುಡ್ಲ.
Share on :

SUDDI

 

Copyright © 2011 Tuluworld - All Rights Reserved