ಬರಹ :- ಸಂಕೇತ್ ಪೂಜಾರಿ
ನಾಗರೀಕತೆ ಬೆಳೆದು ಬಂದಂತೆ ಅದರ ಮೂಲ ಸಂಸ್ಕೃತಿಗಳು ಹಲವಾರು ಕಾರಣಗಳಿಂದ ಪಲ್ಲಟಗೊಂಡು ಅದರ ಮೂಲ ಸಂಸ್ಕೃತಿಯ ಒಂದು ಕೊಂಡಿಯನ್ನು ಉಳಿಸಿಕೊಂಡು ಹೊಸ ಪರಂಪರೆಯೊಂದಿಗೆ ಬದಲಾವಣೆಯ ಹಾದಿ ಹಿಡಿಯುವುದು ಸಹಜ. ಇಂತಹ ಸನ್ನಿವೇಶಗಳಲ್ಲಿ ಒಂದು ಸಣ್ಣ ಸುಳಿವು ಯಾ ಪಳೆಯುಳಿಕೆಗಳಿಂದ ಮೂಲದ ಆಚರಣೆ ಹೇಗೆ ಎಂಬುದನ್ನು ಕಲೆಹಾಕುವುದೇ ಒಂದು ಅಧ್ಯಯನ. ಕೆಲವರ ಅಭಿಪ್ರಾಯ ಹೇಗೆಂದರೆ ಗ್ರಂಥ ಪುಸ್ತಕಗಳಲ್ಲಿ ಬರೆದ ಸಂಶೋಧನೆಗಿಂತ ಒಬ್ಬ ವ್ಯಕ್ತಿಯ ಅನುಭವದ ವಿಚಾರಗಳು ಸತ್ಯಕ್ಕೆ ಹೆಚ್ಚು ಹತ್ತಿರವೆಂಬುವುದು. ಆದರೆ ಒಂದು ಅಧ್ಯಯನ ಗ್ರಂಥ ರಚಿಸುವವನು ಹಲವಾರು ವ್ಯಕ್ತಿಗಳ ಅನುಭವದ ಜೊತೆಗೆ ಹಲವಾರು ಪ್ರಾಚೀನ ವಿಷಯಗಳನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಿ, ತಾಳೆ ಹಾಕಿ ತನ್ನ ಅಭಿಪ್ರಾಯವನ್ನು ಮಂಡಿಸಿ ಸಾರ್ವತ್ರಿಕವಾಗಿ ಚಿಂತನೆ ನಡೆಸಿ ಅಧ್ಯಯನ ಗ್ರಂಥ ರಚಿಸುತ್ತಾನೆಯೇ ಹೊರತು ಅವನಿಗೆ ಯಾವುದೇ ಅಗೋಚರ ಶಕ್ತಿಗಳು ಬಂದು ಹೇಳಿಕೊಡುವುದಿಲ್ಲ ಅಥವಾ ತನಗೆ ಬೇಕಾದ ಹಾಗೆ ಬರೆಯುವುದಾಗಲಿ ಮಾಡುವುದಿಲ್ಲ. ಅದರಲ್ಲೂ ಸಾಗರದಂತಿರುವ ತುಳುನಾಡಿನ ಇತಿಹಾಸ ಮತ್ತು ದೈವರಾಧನೆಯ ಬಗೆಗೆ ಬರೆಯುವಾಗ ಎದುರಾಗುವಂತಹ ಸಂಕಷ್ಟಗಳು ಮತ್ತು ಗೊಂದಲಗಳು ಎಂತಹುದೆಂಬುದು ಒಂದು ಕ್ಷೇತ್ರ ಅಧ್ಯಯನದ ಕೃತಿ ಬರೆದಿರುವ ನಾನು ಹೇಳಬಲ್ಲೆ. ಇಷ್ಟಕ್ಕೂ ಈ ಲೇಖದ ಶೀರ್ಷಿಕೆಗೂ ಇಲ್ಲಿ ನಾನು ಹೇಳುತ್ತಿರುವುದಕ್ಕೂ ಸಂಬಂಧವೇ ಇಲ್ಲವಲ್ಲ ಎಂದು ನಿಮಗಸಿರಬಹುದು. ವಿಷಯ ಇಷ್ಟೇ ಈ 'ಕಂಚಿಕಲ್ಲಿನ' ಬಗ್ಗೆ ಅಧ್ಯಯನ ನಡೆಸಿರುವ ಹಿರಿಯ ಸಂಶೋಧಕ ದಿ|| ರವಿ ರಾ.ಅಂಚನ್ ಅವರ ತುಳುವರ ಯುಗಯಾತ್ರೆ ಕೃತಿಯಿಂದ ಹಲವಾರು ಮೌಲ್ಯಾಧಾರಿತ ವಿಷಯಗಳನ್ನು ಇಲ್ಲಿ ಬಳಸಿಕೊಂಡಿದ್ದೇನೆ. ಇಲ್ಲಿರುವುದು ಸಂಪೂರ್ಣ ಸತ್ಯವೆಂಬ ವಾದವಲ್ಲ. ಇದನ್ನು ಒಪ್ಪಿಕೊಳ್ಳುವವರು ಒಪ್ಪಿಕೊಳ್ಳಬಹುದು. ಹಾಗಂತ ತುಳು ನಾಗರೀಕತೆಯನ್ನು ವೈದಿಕ ಪರಂಪರೆಯೊಂದಿಗೆ ತಾಳೆ ಹಾಕಿ ಎಲ್ಲದಕ್ಕೂ ಮೂಲ ವೈದಿಕವೆಂದೇ ಹೇಳುವವರಿಗೆ ಇದು ಕಟ್ಟು ಕಥೆಯಾಗಿಯೂ ಕಾಣಬಹುದು. ಅದು ಅವರಿಗೆ ಬಿಟ್ಟದ್ದು. ಅದರಲ್ಲಿ ಆಶ್ಚರ್ಯವೂ ವಿಲ್ಲ.
'ಕಂಚಿಕಲ್ಲು' - ತುಳುನಾಡಿನ ಇತಿಹಾಸದಲ್ಲಿ ಇಂತಹದೊಂದು ಪದ ಇಂದು ಕಾಣಸಿಗುವುದು ಬಲು ಅಪರೂಪ. ನಮಗೆಲ್ಲ ಗೊತ್ತಿರುವಂತೆ ತುಳುವರು ಕುಲಭಾಂದವರ (ಗತಿಸಿ ಹೋದ ಹಿರಿಯರು) ಆರಾಧಕರು. ಕೆಲವರು ಈ ಹೇಳಿಕೆನ್ನು ಒಪ್ಪದಿದ್ದರೂ ಇದಕ್ಕೆ ಈಗಲೂ ಹಲವಾರು ಪುರಾವೆಗಳು ನಮ್ಮಲ್ಲಿ ಜೀವಂತವಾಗಿವೆ. ವಾರ್ಷಿಕವಾಗಿ ಹಿರಿಯರಿಗೆ ತಮ್ಮ ತಮ್ಮ ಕುಟುಂಬದ ನೆಲೆಯಲ್ಲಿ ಬಡಿಸುವ ಪರಂಪರೆಯಿಂದ ಹಿಡಿದು ಗುತ್ತು ಬರ್ಕೆಗಳ(ಹೆಚ್ಚಾಗಿ ಬಿಲ್ಲವ ಸಮುದಾಯದ) ಮನೆಗಳಲ್ಲಿ ಮನೆತನದ ಹಿರಿಯ ವ್ಯಕ್ತಿಯ ಅರಾಧನೆಯವರೆಗೆ ಕುಲಭಾಂದವರ ಅರಾಧನೆ ಒಂದಲ್ಲ ಒಂದು ರೀತಿಯಲ್ಲಿ ನಡೆದುಕೊಂಡು ಬಂದಿದೆ. ಇದಲ್ಲದೆ ಮನೆಯಲ್ಲಿ ವಿಶೇಷ ಸಂದರ್ಭದಲ್ಲಿ ಮಾಡುವ ವಿಶೇಷ ಅಡಿಗೆಯನ್ನು ಮೊದಲಾಗಿ ಹಿರಿಯರಿಗೆ ಬಡಿಸುವ(ತಟ್ಟಿಡ್ ದೀಪುನಿ) ಪದ್ದತಿ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇಲ್ಲಿ ನಾನು ಹೇಳಹೊರಟಿರುವ ಕಂಚಿಕಲ್ಲು ಕೂಡ ಭೂತಾರಾಧನೆ ದೈವರಾಧನೆಗೂ ಮುಂಚೆ ಇದ್ದ 'ನಂಬಿದ ಸತ್ಯಗಳ' ಅರಾಧನೆಯ ಒಂದು ವಿಸ್ತೃತ ರೂಪ.
ಕುಲಭಾಂದವರ ಅರಾಧನೆಯನ್ನು ತುಳುವರು ತಮ್ಮ ಆದಿ ಅಲಡೆಯಲ್ಲಿ ಅರಾಧಿಸಿದ ಪ್ರಥಮ ಸಂಕೇತವೇ ಕಂಚಿಕಲ್ಲು. ಇಲ್ಲಿ ಆಲಡೆಯೆಂದರೆ ಪ್ರಸ್ತುತ ಗುರುತಿಸಿಕೊಂಡಿರುವ ಸಿರಿ ಆಲಡೆ ಅಲ್ಲ. ಇದಕ್ಕಿಂತಲೂ ಮೊದಲು ಆದಿ ಅಲಡೆ ಎಂಬ ವ್ಯವಸ್ಥೆ ಇತ್ತು. ಆ ಅಲಡೆಯಲ್ಲಿ ಅರಾಧನೆ ಪಡೆಯುತ್ತಿದ್ದವರು ಗತಿಸಿದ ಹಿರಿಯರು. ಜಾತಿ ವ್ಯವಸ್ಥೆ ರೂಪುಗೊಳ್ಳುವ ಮುಂಚೆ 16 ಕುಲಗಳ ಪರಿಕಲ್ಪನೆಯಲ್ಲಿ ಅಂದಿನ ತುಳುವರ ಬದುಕು ಬೇಟೆಯ ಯುಗದೊಂದಿಗೆ ಆರಂಭಗೊಂಡಿರುವುದು ಒಪ್ಪುವಂತಹ ವಿಚಾರ.
ತುಳುವಿನಲ್ಲಿ ಕಂಚಿ ಎಂಬ ಶಬ್ಧಕ್ಕೆ ಅಂಗ ಎಂಬ ಆರ್ಥ ವಿದ್ದು 'ಕಂಚಿಕಳಲಿ' ಎಂದರೆ ಅಂಗಸಾಧನೆ ನಡೆಯುವ ಸ್ಥಳವೆಂದು ಅಂಚನ್ ಅವರು ತಮ್ಮ ಕೃತಿಯಲ್ಲಿ ಗುರುತಿಸಿದ್ದಾರೆ. ಈ ಬಗ್ಗೆ ಒಂದು ನುಡಿಗಟ್ಟು ಅವರ ಕೃತಿಯಲ್ಲಿ ಉಲ್ಲೇಖವಾಗಿದೆ. 'ಊರುಗಾಪಿನ ಕಂಚಿಕಳಲಿ ಸಾದಗದ ಕೊಟ್ಯ ಕಟ್ಟಾಯೆರ್' ಅಂದರೆ ಊರಿಗೆ ಅನುಕೂಲವಾಗುವಂತೆ ಅಂಗ ಸಾಧನೆಯ ಕೊಟ್ಟಿಗೆ ಕಟ್ಟಿಸಿದರು ಎಂಬುದು.
ತುಳುವರ ಪ್ರಾಚೀನ ಆದಿ ಅಲಡೆಯಲ್ಲಿ ಇದ್ದ ಎರಡು ಕಂಚಿಕಲ್ಲು ಕರಿ ಬಂಡೆಕಲ್ಲುಗಳಾಗಿದ್ದು ನಾವು ಪೂರ್ವಕ್ಕೆ ಮುಖಮಾಡಿ ನಿಂತಾಗ ನಮ್ಮ ಬಲಭಾಗಕ್ಕೆ ಇರುವ ಕಲ್ಲು 'ಹೆಣ್ಣು' ಮತ್ತು ಎಡಭಾಗಕ್ಕೆ ಇರುವ ಕಲ್ಲು 'ಗಂಡು' ಎಂದು ಗುರುತಿಸಲಾಗುತ್ತದೆ. ಅಯಾ ಕುಲದಲ್ಲಿ ಹುಟ್ಟಿ ಗತಿಸಿದ ಸಮಸ್ತ ಹೆಣ್ಣು - ಗಂಡುಗಳ ಪ್ರತೀಕವಾಗಿ ಈ ಜೋಡು ಕಲ್ಲುಗಳನ್ನು ನೆಟ್ಟು ಅರಾಧನೆ ನಡೆಸಿದ ಪ್ರಾಚೀನ ತುಳುವರ ಈ ಪರಂಪರೆ ಇಂದಿನ ದೇವರ ಕಲ್ಪನೆಗಳಾದ 'ಸುಗುಣ'- 'ಸಾಕಾರ' ಮತ್ತು 'ನಿರ್ಗುಣ- ನಿರಾಕಾರ' ಎಂಬ ಪರಿಕಲ್ಪನೆಗಳಂತೆ ಕೇವಲ ಭಾವನಾತ್ಮಕ ನೆಲೆಯಲ್ಲೇ ನಿಲ್ಲದೇ ನಿಸರ್ಗದಲ್ಲಿ ಬೆರೆಯುವ ಒಂದು ವಾಸ್ತವ ಪರಿಕಲ್ಪನೆ ಎಂದು ಅಂಚನ್ ಅವರು ಹೇಳುತ್ತಾರೆ. ಹೌದು, ಸಮಾಜದ ಗಂಡು ಹೆಣ್ಣೆಂಬ ಎರಡು ಜಾತಿಗಳನ್ನು ಸಮಾನವಾಗಿ ಕಾಣುವ ತುಳುವರ ಅಂದಿನ ಸಂಸ್ಕೃತಿ ಜೋಡಿ ಕಂಚಿಕಲ್ಲಿನಲ್ಲಿ ಪ್ರತಿನಿಧಿಸುವ ಈ ಅಪೂರ್ವ ವ್ಯವಸ್ಥೆ ಯಾವುದೇ ಲಿಂಗ ಬೇಧ, ಅಸ್ಪರ್ಶತೆಯ ಮಡಿಮೈಲಿಗಳಿಲ್ಲದೆ ಅರಾಧನೆಗೊಳ್ಳುತ್ತಿದ್ದ ಉಚ್ಚ ಮಟ್ಟದ ಪವಿತ್ರ ಅರಾಧನೆಯಾಗಿತ್ತು. ಕಂಚಿಕಲ್ಲಿನ ಮೂಲ ಪರಿಕಲ್ಪನೆಯಾದ ನಂಬಿದ ಸತ್ಯಗಳ ಅರಾಧನೆಯೆಂದರೆ ತುಳುವರಿಗೆ ದೇವರ ಅರಾಧನೆ. ಈ ಗತಿಸಿಹೋದ ಕುಲಭಾಂದವರಾದ ನಂಬಿದ ಸತ್ಯಗಳೇ ಅವರಿಗೆ ದೇವರು. "ಇದನ್ನು ಒಪ್ಪದವರಿಗೆ ಅವುಗಳು 'ಭೂತಗಳು'! ಇದು ಶಿಷ್ಟತೆಯ ಭ್ರಮೆಯಲ್ಲಿ ಬೆಸೆದ ಹಣೆಪಟ್ಟಿಯ ಪರಿಶಿಷ್ಟತೆ" ಎಂಬ ಅಂಚನ್ ಅವರು ಮಾತು ಅರ್ಥಗರ್ಭಿತವಾದದ್ದು. ತುಳುವರ ಅಲೆಮಾರಿ ಜೀವನ ಮತ್ತು ಅಂದಿನ ಸಾವಿರ ಸಾವಿರ ವರ್ಷಗಳ ಪ್ರಾಚೀನ ಬದುಕು ಮುಖ್ಯವಾಗಿ ಬೇಟೆಯನ್ನೇ ಅವಲಂಬಿಸಿತ್ತು. ಆಹಾರಕ್ಕಾಗಿ ನಡೆಸುತ್ತಿದ್ದ ಸಮೂಹ ಸಂಸ್ಕೃತಿಯ 'ಬೇಟೆ'ಯ ಆರಂಭ ಮತ್ತು ಅಂತ್ಯದ ಕಾರ್ಯಗಳು ಕಡ್ಡಾಯವಾಗಿ ನಡೆಯುತ್ತಿದ್ದದು ಇದೇ ಕಂಚಿಕಲ್ಲುಗಳಿದ್ದ ಆದಿ ಅಲಡೆಯಲ್ಲಿ. ಅಯಾ ಕುಲದ ಮೂಲದ ಆಲಡೆಯಿಂದ ಹೊರಟ ಬೇರೆ ಬೇರೆ ಕುಲದವರು ಒಂದು ತಾಣದಲ್ಲಿ ಸಂಧಿಸುತ್ತಿದ್ದರು. ಆ ತಾಣಕ್ಕೆ ಪಂಜಿಕಲ್ಲು ಎಂಬ ಹೆಸರು ಇತ್ತು. ಈ ಪಂಜಿಕಲ್ಲಿನಲ್ಲಿ ಬೇಟೆಯ ಮೃಗಮಾಂಸದ ವಿತರಣೆ ಆದ ಬಳಿಕ ತಮ್ಮ ಪಾಲಿನ ಬೇಟೆಯ ಪಾಲನ್ನು ಪಡೆದುಕೊಂಡು ತಮ್ಮ ತಮ್ಮ ಆಲಡೆಗೆ ಬಂದು ಅಲ್ಲಿ ನಂಬಿದ ಸತ್ಯಗಳ ಕಂಚಿಕಲ್ಲುಗಳಿಗೆ ಮಾಂಸವನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುವುದು ತುಳುವರ ಪ್ರಾಚೀನ ಸಂಸ್ಕೃತಿಯ ಒಂದು ಬಹು ಮುಖ್ಯ ಪದ್ದತಿ. ಇನ್ನು ಇಲ್ಲಿ ಮತ್ತೊಂದು ಗಮನೀಯ ವಿಚಾರವೆಂದರೆ ಈ ಎರಡು ಜೋಡಿಕಲ್ಲುಗಳಿಗೆ ಕಲ್ಲುಕುಟಿಕ ಮತ್ತು ಕಲ್ಲುರುಟಿ ಎಂಬ ಹೆಸರಗಳಿದ್ದು ಇವುಗಳನ್ನು ಸಂಯುಕ್ತವಾಗಿ ಕಂಚಿಕಲ್ಲ್ ಎಂದು ಕರೆಯುತ್ತಿದ್ದರು. ಈ ಕಲ್ಲುರುಟಿ ಕಲ್ಲುಕುಟಿಕಗಳಿಗೂ ಈಗಿನ ಕಲ್ಕುಡ ಕಲ್ಲುರ್ಟಿ ದೈವಗಳಿಗೂ ಯಾವುದೇ ಸಂಬಂಧವಿಲ್ಲವೆಂಬುವುದನ್ನು ಇಲ್ಲಿ ಪರಿಗಣಿಸಬೇಕು. ಈ ಕಂಚಿಕಲ್ಲಿನ ಅರಾಧನೆಗೂ ಒಂದು ಕೂಡು ಕಟ್ಟು ಮತ್ತು ಅರಾಧನ ವ್ಯವಸ್ಥೆ ಇತ್ತು. ಅಯಾ ಕುಲದ ಹಿರಿಯ ಯಜಮಾನ ಯಜಮಾನಿಗೆ ಕಾಪಾಡ ಕಪಾಡ್ತಿಯಿರೆಂಬ ಹೆಸರಿತ್ತು. ಇವರೇ ಕುಲದ ಮುಖ್ಯ ಮಾರ್ಗದರ್ಶಕರಾಗಿದ್ದರು. ಕಾಲಾಂತರದಲ್ಲಿ ಈ ಪದವಿಗೆ ಪರ್ಯಾಯವಾಗಿ 'ಪಾಲವ' ಮತ್ತು ಮುಕ್ಕಾರಿ ಎಂಬ ಶಬ್ದಗಳು ಬಳಕೆಯಾಗಿತ್ತು. ಇದಲ್ಲದೆ ಆಲಡೆಯ ಅರಾಧನೆಗಳಿಗೆಲ್ಲಾ ಮಾರ್ಗದರ್ಶನ ನೀಡುವ ಆ ಕುಲದ ಹಿರಿಯ ಹೆಂಗಸನ್ನು 'ಮುಕ್ಕಾಲ್ದಿ' ಎಂದು ಗೌರವ ಸೂಚಕವಾಗಿ ಕರೆಯುವ ಪರಿಪಾಠ ಇತ್ತು ಎಂದು ರವಿ.ರಾ ಅಂಚನ್ ಅವರ ಅಧ್ಯಯನ ತಿಳಿಸುತ್ತದೆ. ಆದರೆ ಈ ಶಬ್ದ ಈಗ ಗಂಡಿನ ಏಕಸ್ವಾಮ್ಯಕ್ಕೆ ಒಳಾಗಿರುವುದು ವಿಪರ್ಯಾಸ.
ಪ್ರತಿ ಸಂಕ್ರಮಣ ಮತ್ತು ಅಮಾವಾಸ್ಯೆಯಂದು ತುಳುವರು ತಮ್ಮ ಕುಲ ಮೂಲದ ಆದಿ ಆಲಡೆಗೆ ತೆರಳಿ ಅಲ್ಲಿ ನಂಬಿದ ಸತ್ಯಗಳ ಅರಾಧನೆ ನಡೆಸುವ ಕ್ರಮ ಇತ್ತು. ಕುಲದ ಹಿರಿಯ ಹೆಂಗಸು ಮತ್ತು ಗಂಡಸು ಹಾಗು ಅವರ ಕೂಡು ಕುಟುಂಬ ಕುಲ ಭಾಂದವರು ಸೇರಿ ತಮ್ಮ ಆದಿ ಅಲಡೆಯ ಕಂಚಿ ಕಲ್ಲಿನಲ್ಲಿ ಎರಡು ಬಾಳೆ ಎಲೆಗಳನ್ನು ಹಾಕಿ ಅದರಲ್ಲಿ ಎಡೆ ಬಡಿಸಿ ನಂತರ ಎಲ್ಲರೂ ಸೇರಿ, ಒಂದು ಕಾಲದಲ್ಲಿ ತಮ್ಮ ಕುಲದ ಸದಸ್ಯರಾಗಿದ್ದವರು ಇಂದು ಕಣ್ಮರೆಯಾಗಿರುವ ಹಿರಿಯರನ್ನು ಸ್ಮರಿಸಿ ಬಡಿಸಿದ ಎಡೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತಿದ್ದರು. ಆ ಅಲಡೆಯ ನೆಲದ ಮಣ್ಣನೇ ಕರಿಗಂಧವಾಗಿ ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದಾದ ನಂತರ ಕುಲದ ಹಿರಿಯ ಹೆಂಗಸು ಮುಕ್ಕಾಲ್ದಿಯಾಗಿ ಹಿರಿಯ ಗಂಡಸು ಕಾಪಾಡನಾಗಿ ಕುಲಬಾಂದವರೆಲ್ಲ ಸೇರಿಕೊಂಡು ತಮ್ಮ ಆದಿ ಆಲಡೆಯ ಮರದ ಸುತ್ತು ನಿಂತು 'ಕಂಚಿಕಲ್ಲಿಗೆ' ಮಂಡಲಾಕಾರದಲ್ಲಿ ಕುಣಿಯುವ ವಿಶಿಷ್ಟ ಪರಂಪರೆ ಅಂದಿನ ಪ್ರಾಚೀನ ತುಳುವರಲ್ಲಿ ಇತ್ತು. ಆದರೆ ಅಂಚನ್ ಅವರು ಹೇಳುವ ಪ್ರಕಾರ ಲಿಂಗ ಸಮಾನತೆಯ ಜೊತೆ ಕುಲಬಾಂಧವ್ಯಗಳನ್ನು ಗಟ್ಟಿಗೊಳಿಸುವ ಸಮೂಹ ಚಿಂತನೆಯ ಈ ಆಚರಣೆ ಯಾವಾಗ ಊಳಿಗಮಾನ್ಯ ವ್ಯವಸ್ಥೆಯ ಹಲ್ಲೆಗೆ ಒಳಗಾಯಿತೋ ಅಂದಿನಿಂದ ಅವು ಜಾತಿ, ವರ್ಗ, ಮತ ಮತ್ತು ಲಿಂಗ ಬೇಧಗಳನ್ನು ಜೋಡಿಸಿಕೊಂಡು ಮೂಲ ಪರಂಪರೆಯ ನಾಶಕ್ಕೆ ನಾಂದಿಹಾಡಿತು.
ತುಳುವರ ದೈವಾರಾಧನೆ ಭೂತಾರಾಧನೆಗೂ ಮುನ್ನ ಅದೇ ಹಾದಿಯಲ್ಲಿ ಆರಂಭಿಕ ಬೆಸುಗೆ ಬೆಸೆದ ನಂಬಿದ ಸತ್ಯಗಳೆಂಬ ಕಂಚಿಕಲ್ಲಿನ ರೂಪದಲ್ಲಿ ಅರಾಧಿಸುತ್ತಿದ್ದ ಹಿರಿಯರ ಅರಾಧನೆ ಇಂದಿಗೂ ತುಳುವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅರಾಧನೆಯ ವಿಧಗಳು ಬದಲಾದರೂ ತಮ್ಮ ಕುಲಭಾಂದವರ ಸ್ಮರಣೆ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿದೆ. ಇಂತಹ ಹಿರಿಯರ ಅರಾಧನೆಗೆ ಅಂದಿನ ಕಾಲದಲ್ಲಿ ಯಾವುದೇ ಜ್ಯೋತಿಷ್ಯ ಬಲಿಮೆಯೂ ಇರಲಿಲ್ಲ. ಅಂದಿನ ತುಳುವರು ಗತಿಸಿದ ತುಳುವರ ಅಸ್ತಿತ್ವವನ್ನು ಪ್ರಶ್ನೆ ಮಾಡಲೂ ಇಲ್ಲ. ಸ್ವರ್ಗನರಕ ಅಥವಾ ಪುನರ್ಜನ್ಮದ ಪರಿಕಲ್ಪನೆಯೇ ಇಲ್ಲದ ತುಳುವರ ತೌಳವ ಪರಂಪರೆಯಲ್ಲಿ ಗತಿಸಿ ಹೋದ ಹಿರಿಯರನ್ನು ಅವರು ಗತಿಸಿದ ನಂತರ ನಿರ್ದಿಷ್ಟ ದಿನಗಳ ಒಳಗೆ ಅವರಿಗೆ ಹೊರಗಿನ ಬೊಜ್ಜದ ಕಾರ್ಯ ಮಾಡಿ ರಾತ್ರಿ ಒಳಗಿನ ಬೊಜ್ಜ ಅಂದರೆ ಉಲಾಯಿ ಲೆಪ್ಪುನಿ ಎಂಬ ವಿಧಿಯನ್ನು ಪೂರೈಸಿ ಮನೆಯೊಳಗೆ ಕರೆದು ಅವರು ತಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆಯೊಂದಿಗೆ ಅರಾಧಿಸುತಿದ್ದರೇ ಹೊರತು ಪಿಂಡ ಬಿಟ್ಟು ಮನೆಯಿಂದ ಹೊರಗಟ್ಟಿಸುತ್ತಿರಲಿಲ್ಲ. ಇನ್ನು ಸ್ವರ್ಗ ನರಕದ ಕಲ್ಪನೆ ಇಲ್ಲದ ತುಳುವರ ಆಚರಣೆಯಲ್ಲಿ ಸ್ವರ್ಗಾಧಿಪತಿಯಾದ ಇಂದ್ರನಾಗಲಿ ನರಕ ಲೋಕದ ಯಮನ ಕಲ್ಪನೆಯಾಗಲಿ ಬರಲು ಸಾದ್ಯವಿಲ್ಲ. ದೈವಾರಾಧನೆಯಲ್ಲಿ ಹೆಚ್ಚಿನ ದೈವಗಳು ಸ್ವಪ್ನದ ಮುಖಾಂತರ ತಮ್ಮ ಅಸ್ತಿತ್ವ ತೋರಿಸಿದ್ದರೆ ಕೆಲವು ಬಲ್ಯಾಯರ ಬಲಿಮೆಯಲ್ಲಿ ಕಂಡಿವೆ. ಈ ಎರಡೂ ರೀತಿಯಲ್ಲಿ ಕಂಡು ಬಂದ ದೈವಗಳ ಇತಿಹಾಸ ಲೆಕ್ಕ ಹಾಕಿದರೆ ತುಳುವರ ಪರಂಪರೆಯ ಬಲಿಮೆ ಜ್ಯೋತಿಷ್ಯಕ್ಕೂ ಮೀರಿದ ಚಿಂತನೆ. ಯಾವುದೋ ಕಾಲಘಟ್ಟದಲ್ಲಿ ತುಳುನಾಡಿಗೆ ಪ್ರವೇಶ ಮಾಡಿದ ವೈದಿಕ ಪರಂಪರೆ ತುಳುನಾಡಿನ ಸಂಸ್ಕೃತಿಯೊಂದಿಗೆ ಬೆರೆತಿವೆಯೇ ಹೊರತು ತುಳುವರ ಸಂಸ್ಕೃತಿಗೆ ಮೂಲವಾಗಿಲ್ಲವೆಂಬುದನ್ನು ನಾವು ಕಂಚಿಕಲ್ಲಿನಂತಹ ಅರಾಧನೆ ಇದ್ದ ಸಾವಿರ ಸಾವಿರ ವರ್ಷಗಳ ಹಿಂದಿನ ಇತಿಹಾಸ ಕೆದಕುವುದರ ಮೂಲಕ ಕಂಡುಕೊಳ್ಳಬಹುದು. ಹಿರಿಯರ ಅರಾಧನೆಗೆ ಹೆಚ್ಚು ಒತ್ತು ಕೊಟ್ಟಿದ್ದ ತುಳು ಪರಂಪರೆಯಲ್ಲಿ ಭೂತಾರಾಧನೆ ದೈವಾರಾಧನೆ ಇನ್ನಷ್ಟು ಪ್ರಮುಖ ಸ್ಥಾನವನ್ನು ಪಡೆದು ನಂಬಿದ ಸತ್ಯಗಳ ಅರಾಧನೆ ವಾರ್ಷಿಕ ಅಗೇಲು ಮತ್ತು ಕಾಲೆಕೋಲಗಳಂತಹ ಸ್ವರೂಪ ಪಡೆಯಿತು. ಮನೆಯಲ್ಲಿ ಜನಾನುರಾಗಿ ಬಾಳಿದ ಹಿರಿಯರು ಗತಿಸಿದಾಗ ಅವರನ್ನು ಮತ್ತೆ ನೋಡುವ ಸಲುವಾಗಿ ಅವರಲ್ಲಿ ಮಾತನಾಡುವ ಸಲುವಾಗಿ ಕಾಲೆಕೋಲಗಳಂತಹ ಅರಾಧನೆ ಆರಂಭವಾಯಿತು ಎಂಬ ಮಾತೂ ಇದೆ. ಅದೇ ರೀತಿ ಕಾಲೆಕೋಲ ಕಟ್ಟಿದ ವ್ಯಕ್ತಿಯು ಆ ಕುಟುಂಬದ ಮನೆ ಬಾಗಿಲಿನಲ್ಲಿ ನಿಂತು ಕುಟುಂಬದ ವ್ಯಕ್ತಿಗಳ ಯೋಗ ಕ್ಷೇಮ ವಿಚಾರಿಸುವ ಮತ್ತು ತಾನು ಗತಿಸಿ ಹೋಗಿದ್ದರೂ ನಿಮ್ಮೊಂದಿಗೆ ಸದಾ ಇರುವೆನೆಂಬ ಭಾವನಾತ್ಮಕ ನುಡಿಯನ್ನು ಕೊಡುವ ಪರಿಪಾಠವು ಕಂಚಿಕಲ್ಲಿನ ಪ್ರಾಚೀನ ಪರಂಪರೆಗೆ ಜೋಡಿಸುವ ಬೆಸುಗೆಯಂತೆ ತೋರುತ್ತದೆ.
ಪರಾಮರ್ಶನ ಕೃತಿ :- ತುಳುವರ ಯುಗಯಾತ್ರೆ
(ಓದುಗರಲ್ಲಿ ವಿನಂತಿ - ದಯವಿಟ್ಟು ಹೆಸರು ಬದಲಿಸಿ ಈ ಲೇಖನವನ್ನು ಶೇರ್ ಮಾಡಬೇಡಿ)