ಇಂದು ತುಳುನಾಡಿನ ಹೆಚ್ಚಿನ ಗುತ್ತು, ಬಾರೀಕೆ,ಬನ, ವನ ಮಾಡ,ಮನೆಗಳಲ್ಲಿ ಕಾಣ ಸಿಗುವ ಈ ಹೆಸರು ಹಿಂದೆ ಯಾವ ಶಕ್ತಿಯ ಹೆಸರಿನಲ್ಲಿ ಆರಾಧನೆ ಪಡೆಯುತ್ತಿತ್ತು???
ಯಾಕೆ ತುಳುವರ ಒಂದು ಮೂಲ ದೈವ ಶಕ್ತಿಯೊಂದಿಗೆ ಇದೊಂದು ಹೆಸರು ಹೊಸದಾಗಿ ತಳುಕು ಹಾಕಿ ಗೊಂಡಿತು?
ಇದಕ್ಕೆಲ್ಲ ಉತ್ತರ ಹುಡುಕುವ ಮೊದಲು ನಾವು ನಮ್ಮ ಹಿರಿಯರು ಅರಾಧಿಸಿಕೊಂಡು ಬಂದ ಮೂಲ ಶಕ್ತಿಯ ವಿಚಾರವನ್ನು ತಿಳಿದುಕೊಳ್ಳೊಣ.
"ಲೆಕ್ಕೆಸಿರಿ" ಎನ್ನುವ ದೈವ ಶಕ್ತಿಯ ಹೆಸರನ್ನು ಎಲ್ಲಾ ತುಳುವರು ತಿಳಿದು ಕೊಂಡಿರಬಹುದು.
ತುಳುನಾಡಿನಲ್ಲಿ ಎಲ್ಲಿ ನೀರಿನ ಒಸರು(ಹರಿವು) ಹೆಚ್ಚಾಗಿ ಇರುತ್ತದೋ,ಎಲ್ಲಿ ಹಚ್ಚ ಹಸಿರಾಗಿ ಕೃಷಿ, ಬೇಸಾಯ ತುಂಬಿ ತುಳುಕುತ್ತಾ ಬರುತ್ತದೋ ಅಲ್ಲಿ ಲೆಕ್ಕೆಸಿರಿ ಎಂಬ ಶಕ್ತಿ ತಾನಗಿಯೆ ಉದ್ಬವ ಕೊಳ್ಳುತ್ತದೆ ಎಂದು ತುಳುವರ ನಂಬಿಕೆ.
ಲೆಕ್ಕೆಸಿರಿ ಅನ್ನುವುದು ತುಳುನಾಡಿನಲ್ಲಿ ಬೆರ್ಮರ್,ಪಂಜುರ್ಲಿ,ನಾಗ, ಮೈಸೊಂದಯ,ಪಿಲ್ಚಂಡಿ, ಜುಮಾದಿ ದೈವದ ಹಾಗೆಯೇ ಅದಿಮೂಲ ದೈವ.
ಮೂಲತಃ ಗಂಡು ರೂಪದ ದೈವ ಲೆಕ್ಕೆಸಿರಿ ಎಂದು ಹಿರಿಯರು ಹೇಳುತ್ತಾರೆ. ಭೂಮಿ ತೂಕದ ದೈವ ಎನ್ನುತ್ತಾರೆ.ಗರೀಕೆ ಹುಲ್ಲು ಹುಟ್ಟಿಕೊಂಡಾಗ ಹುಟ್ಟಿದ ಶಕ್ತಿ ಎನ್ನುತ್ತಾರೆ.
ತುಳುವರ ಅದಿಮೂಲ ಅಲಡೆಗಳಲ್ಲಿ ಅನಾದಿಕಾಲದಿಂದಲೂ ಅರಾಧಿಸಿಕೊಂಡು ಬಂದ ಅದಿಮೂಲ ದೈವ ಶಕ್ತಿಗಳಲ್ಲಿ ಲೆಕ್ಕೆಸಿರಿ ಶಕ್ತಿ ಕೂಡ ಒಂದು. ಲೆಕ್ಕೆಸಿರಿಯನ್ನು ಸಿರಿಬೊಳ್ಳಿ ಎಂದೂ "ಬಾಲೆ ಕನ್ಯೆವು" ಎಂದೂ ಕರೆಯುದುಂಟು.ಅಂದರೆ ಒಂದಾರ್ಥದಲ್ಲಿ ಹೆಣ್ಣು ರೂಪ ಕೂಡ ಇದೆ ಎಂದೂ ಹೇಳಬಹುದು.ಹಾಗೆಯೇ ತುಳುನಾಡಿನ ದೈವಗಳು "ಅನ ತರೆ, ಪೊಣ್ಣ ನೆರಿ" ಹೊಂದಿರುವ ದೈವ ಎನ್ನಲೂ ಬಹುದು. "ಮಮತೆಯಲ್ಲಿ ಹೆಣ್ಣು, ಶೌರ್ಯದಲ್ಲಿ ಗಂಡು" ಎಂದು ಈ ರೀತಿಯ ರೂಪವನ್ನು ಕೊಟ್ಟಿರಬಹುದು."ಪ್ರೀತಿ ವಾತ್ಸಲ್ಯ ದಲ್ಲಿ ಹೆಣ್ಣು,ಉಗ್ರದಲ್ಲಿ ಗಂಡು ರೂಪ" ಎಂದೂ ಹೇಳುತ್ತಾರೆ. ಹಾಗೆಯೇ
ಸಮರ ದೇವತೆ ರೂಪದ ದೈವಗಳಲ್ಲಿ ಲೆಕ್ಕೆಸಿರಿಯು ಒಂದು.ಇದಕ್ಕೆ ಮೂಲ ಹುಟ್ಟಿನ ಕಥೆಗಳು ಸರಿಯಾಗಿ ಸಿಗುವುದಿಲ್ಲ.
ಲೆಕ್ಕೆಸಿರಿ ಮೊದಮೊದಲು ಬನ(ವನ)ದಲ್ಲಿ ಅರಾಧಿಸಿಕೊಂಡು ಬಂದ ಶಕ್ತಿ. ಕೇವಲ ಕಲ್ಲು,ಬಂಡೆಕಲ್ಲಿನಲ್ಲಿ ಅರಾಧನೆ ಮಾಡಿದ ಕಾಲದಲ್ಲಿ ಲೆಕ್ಕೆಸಿರಿಗೆ ಪರ್ವ ತಂಬಿಲ ಮಾತ್ರ ನಡೆಯುತ್ತಿತ್ತು ಎಂದು ಹೇಳಬಹುದು. ಆದರೆ ಹಿಂದಿನ ಅನಾದಿ ಕಾಲದ ತುಳುವರಲ್ಲಿ ಒಂದು ಮಾತು ಇತ್ತಂತೆ. "ಯೆಂಕ್ ಒಂಜಿ ಉಂಡು ಬೂತ ಲೆಕ್ಕೆಸಿರಿ,ಯಾನ್ ಮಲ್ತಿನ ಮಾತ ಅಯಿಕೆ ಸರಿ" ಅಂದರೆ ನನಗೊಂದು ಉಂಟು ದೈವ ಲೆಕ್ಕೆಸಿರಿ,ನಾನು ಮಾಡಿದೆಲ್ಲಾ ಅದಕ್ಕೆ ಸರಿ" ಇಲ್ಲಿ ಅರ್ಥ ಏನೆಂದರೆ ಲೆಕ್ಕೆಸಿರಿ ದೈವಕ್ಕೆ ತಂಬಿಲ ಪರ್ವ ಎಲ್ಲಾ ಹೆಚ್ಚಿನ ಮಟ್ಟದಲ್ಲಿ ಸಂದಾಯ ಅಗ ಬೇಕು. ಸೀಯಾಳ ಬೊಂಡ,ಹಿಂಗಾರ ಹೂ ಎಲ್ಲಾ ಹೆಚ್ಚು ನೀಡಬೇಕು. ಯಾಕೆಂದರೆ ಅದು ಭೂಮಿ ತೂಕದ ದೈವ.ಈ ಭೂಮಿ ಉಗಮ ಅದಾಗಲೇ ಲೆಕ್ಕೆಸಿರಿ ದೈವ ಹುಟ್ಟಿಕೊಂಡ ಭೂಮಿ ಬಾರಗ ದೈವ ಎಂದು ತುಳುವರ ನಂಬಿಕೆ.
ತದನಂತರ ಲೆಕ್ಕೆಸಿರಿಯನ್ನು ಮೂರ್ತಿ ಆರಾಧಕರಾದ ಜೈನರಸರ ಅಳ್ವಿಕೆಯ ಕಾಲದಲ್ಲಿ ಸಾನಮಾಡದಲ್ಲಿ ಮತ್ತು ಚಾವಡಿಯಲ್ಲಿ ಸ್ಥಾಪನೆ ಮಾಡಿ ನಂಬಿರಬಹುದು ಎಂದು ನನ್ನ ಅನಿಸಿಕೆ.ಅವಾಗ ಈ ದೈವಕ್ಕೆ ಮಂಚಮದಲ್ಲಿ ಇದ್ದಿದ್ದು ಕೇವಲ ಒಂದು "ಊಜಿ ನೀರು" ಇಡುವ ಕ್ರಮ ಮತ್ತು ಕಾಲಾದಿ ತಂಬಿಲ ನಡೆಯುತ್ತಿತ್ತು.ಅನಂತರದಲ್ಲಿ ಒಂದು ಅಲವಿನ ಉದ್ದನೆಯ ಖಡ್ಸಲೆ ಮತ್ತು ಒಂದು ಮಣಿ.ಈ ಕಡ್ಸಲೆಯನ್ನು ನೋಡಿದಾಗ ಇದು ಸಮರ ಯಾ ಯುದ್ದಕ್ಕೆ ಬಳಸುವ ಕತ್ತಿಯಾಗೆ ಹೋಲುತ್ತದೆ. ಈಗಲೂ ಕೆಲವು ಹಳೆಯ ಗುತ್ತು ಬಾರೀಕೆಗಳಲ್ಲಿ ಲೆಕ್ಕೆಸಿರಿಯ ಈ ಉದ್ದನೆಯ ಕಡ್ಸಲೆ ಮತ್ತು ಮಣಿ ,ಕೆಲವೆಡೆ ಗುರಾಣಿ ಇದೆ.
ಅಹ ಕಾಲದಲ್ಲಿ ಹೆಚ್ಚಾಗಿ ಜೈನರಸರನ್ನು ಬಿಟ್ಟು ಎಲ್ಲೂ ಲೆಕ್ಕೆಸಿರಿಗೆ ಮೂರ್ತಿ ಪೂಜೆ ಇರಲಿಲ್ಲ ಎನ್ನಬಹುದು. ಬಿಲ್ಲವರ ಪ್ರಸಿದ್ಧ ಕುಪ್ಪೆಟ್ಟು ಬಾರೀಕೆಯಲ್ಲಿ ಲೆಕ್ಕೆಸಿರಿಗೆ ಈಗಲೂ ಎರಡು ತೆಂಗಿನಕಾಯಿಯಲ್ಲಿ ಅರಾಧನೆ ನಡೆಯುತ್ತಿದೆ.ಕೆಲವರ ಮನೆಯಲ್ಲಿ ಕೇವಲ ಮಂಚಮದಲ್ಲಿ ಊಜಿ ನೀರು ಲೆಕ್ಕೆಸಿರಿಗೆ,ಇನ್ನು ಕೆಲವರ ಮನೆಯಲ್ಲಿ ಕಡ್ಸಲೆ ಮಣಿ ಮಾತ್ರ ಇರುವುದು.
ತದನಂತರದಲ್ಲಿ ಕೆಲವೊಂದು ಅನುಕೂಲವಂತ ಗುತ್ತು ಬಾರೀಕೆಯ ಜನರು ಲೆಕ್ಕೆಸಿರಿಯನ್ನು ಚಾವಡಿಯ ಭಾಮಕ್ಕೆ ತಂದು ಅದಕ್ಕೊಂದು ರೂಪ ಕೊಟ್ಟು ವಿವಿಧ ಹೆಸರುಗಳಿಂದ ಕರೆದರು.ಅವಾಗ ಇದಕ್ಕೆ ಮೂರ್ತಿ ಬಂದಾಗ ಮೂರ್ತಿಯ ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ಗುರಾಣಿ,ಇನ್ನೂ ಕೆಲವೊಂದು ಮೂರ್ತಿಯಲ್ಲಿ ಸುರಿಯ ಇನ್ನೊಂದು ಕೈಯಲ್ಲಿ ಮಣಿ,ತಲೆಯಲ್ಲಿ ಸಿರಿಮುಡಿ,ಮುಖದಲ್ಲಿ ಮೀಸೆ ಇತ್ಯಾದಿ ವರ್ಣನೆ ಬಂತು.ಹಾಗೆಯೇ ಒಂದೊಂದು ಮನೆಯಲ್ಲಿ ಲೆಕ್ಕೆಸಿರಿಗೆ ಒಂದೊಂದು ಹೆಸರು ಬಂತು.
ಅಂತಹ ಹೆಸರುಗಳಲ್ಲಿ ಪಡ್ಡೊಟ್ಟುನ್ನಾರು,ರಾಜಪತಿ ರಾವುದ್ರ,ಕಾರಂದಾಯೆ,ಕುಡುಮುಲ್ದಾಯೆ,ಬನ್ನಡ್ಕತ್ತಾಯೆ, ಹಳ್ಳತ್ತಾಯೆ, ಮದ್ದಡ್ಕತ್ತಾಯೆ,ಮುಜಿಲ್ನಾಯೆ(ಮಾಹಿತಿ ಸಂಕೆತ್ ಪೂಜಾರಿ) ಇನ್ನೂ ಇತ್ಯಾದಿ ಗ್ರಾಮ ಸಂಬಂಧಿ ಹೆಸರುಗಳಿವೆ.
ಇದು ಸಮರ ದೇವತೆಯ ರೂಪದಲ್ಲಿ ಒಂದು ಕೈಯಲ್ಲಿ ಗುರಾಣಿ ಇನ್ನೊಂದು ಕೈಯಲ್ಲಿ ಕಡ್ಗ ಹಿಡಿದು ನೇಮ ವಾಗುದ ಹೊತ್ತಲ್ಲಿ ಕುಣಿಯುತ್ತದೆ.
ಲೆಕ್ಕೆಸಿರಿಗೆ ಮೊದಲು ಎಲ್ಲಾ ಗುತ್ತು ಬೂಡುಗಳ ಮನೆಗಳಲ್ಲಿ ಚಾವಡಿಯ ಒಳಗಡೆಯೆ ಹೆಚ್ಚಾಗಿ ನೇಮ ನಡೆಯುತ್ತಿತ್ತಂದೆ.ಚಾವಡಿಯ ಒಂದು ಬದಿಯಲ್ಲಿ ಕದಿಕೆ ಇಲ್ಲವೆ ಸೀರೆ ಸುತ್ತು ಕಟ್ಟಿ ಅದರ ಒಳಗೆ ದೈವದ ಹಿಂಬಲಕ ಕುಳಿತು ತೆಂಬರೆ ಬಡಿಯುತ್ತ ಸಂಧಿ ಹೇಳುತ ಹದಿನಾರು ಅವತಾರ ಅಗಿ ಅನಂತರದಲ್ಲಿ ಅಣಿಮುಡಿ ಏರಲೂ ಮತ್ತು ಇನ್ನೂ ಕೆಲವೆಡೆ
ಬೆಂಕಿಯಲ್ಲಿ ಕುಣಿಯಲು ದೈವ ಲೆಕ್ಕೆಸಿರಿ ಅಂಗಲಾಕ್ಕೆ ಪ್ರವೇಶಿಸುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ.ಆಗಿನ ಕಾಲದಲ್ಲಿ ಈಗಿನಂತೆ ವರ್ಷ ವರ್ಷ ಎಲ್ಲೂ ಹೆಚ್ಚಾಗಿ ನೇಮ ನಡೆಯುತ್ತಿರಲಿಲ್ಲ. ದೊಂಪದಬಲಿ ನೇಮ ಮಾತ್ರ ವರ್ಷ ವರ್ಷ ನಡೆಯುತ್ತಿತ್ತಂತೆ.
ಅಹ ಕಾಲದಲ್ಲಿ ಈ ದೈವಕ್ಕೆ ನೇಮ ಕಟ್ಟುವುದೆ ವಿಶೇಷ ಎನ್ನುತ್ತಾರೆ.ಹದಿನಾರು ಅಬತಾರದಲ್ಲಿ ಈ ದೈವಕ್ಕೆ ನೇಮ ನಡೆಯುವುದು.ಒಂದು ಅವತಾರ ಅದ ನಂತರ ದೈವದ ಮುಕ್ಕಾಲ್ದಿ ಅಡಿಕೆ ವೀಳ್ಯದೆಲೆ ಕೊಡುತ್ತಾರೆ.ಹೀಗೆಯೇ ಸತತ ಹದಿನಾರು ಸಲ ವೀಳ್ಯದೆಲೆ ಅಡಿಕೆ ಕೊಡುತ್ತಾರೆ.ಲೆಕ್ಕೆಸಿರಿಯ ಹುಟ್ಟು ಸಂಧಿ ಇಲ್ಲದಿದ್ದರೂ(ಸಮರ ದೇವತೆಗಳಿಗೆ ಸರಿಯಾದ ಹುಟ್ಟು ಸಂಧಿ ಇರುವುದಿಲ್ಲ,ಇದು ಉದ್ಬವ ಅಗುವ ಕಥೆ ಜಾಸ್ತಿ) ಪ್ರಸರಣೆಯ ಸಂಧಿಯಲ್ಲಿ ಬಾನು ಸೇನವರ ಸಂಧಿ ಮೊದಲು ಬರುತ್ತಾದೆ.
ಗಂಗೆ ಮದಿಮಾಲ್,ಗೌರಿ ಮದಿಮಲ್,ಒಪತ್ತಿ ಮದಿಮಲ್,ಬಾಲೆ ಮದಿಮಯೆ,ಬಾನು ಸೇನವ ಮುಖ್ಯವಾಗಿ ಬರುವ ಹೆಸರುಗಳು.
ಅಂಗ ದೇಶ ಕೊಂಗನಾಡು ಪೆರಿಯ ಬಡಕಾಯಿ ಗಂಗೆ ಲೆಕ್ಕೆಸಿರಿ ಯ ಜನನ ಎಂದು ಪಾರ್ದನದಲ್ಲಿ ಉಲ್ಲೆಖ ಬರುತ್ತದೆ.ಅಲ್ಲಿಂದ ಬಾನು ಸೇನಪ್ಪನ (ಕೆಲವರು ಮರಿಗಲ್ಲ ಬೂಡು ಎಂದು ಹೇಳುತ್ತಾರೆ) ಜನನಾಂದ ಬೂಡಿಗೆ ಲೆಕ್ಕೆಸಿರಿ ಬರುವ ಉಲ್ಲೆಖ. ಮೂಜಂತರಬೂಡು, ಪಲ್ಲಮಂಜ ಬೊಟ್ಟು ಉಪದೇಶಿ ಕೊಟ್ಯನ್ನ ಬಾಲೊಲಿ,ಕೊಟ್ಟಾರಿ ಬನ್ನಾಯೆ, ಶಂಕರ ಬಾಲೊಲಿ,ಶಾಂತಣ್ಣ ಬನ್ನಾಯ ಮುಂತಾದವರು ಈ ಪಾರ್ದನದಲ್ಲಿ ಪ್ರಾಧನವಾಗಿ ಬರುತ್ತಾರೆ.ಬಾನು ಸೇನಪ್ಪನ ಬೂಡಿನಲ್ಲಿ ಏಳು ವರ್ಷ ಪ್ರಾಯದ ಹೆಣ್ಣುಮಗಳಾಗಿ ಒಮ್ಮೆ ಕುಣಿದು,ಒಮ್ಮೆ ನಲಿದು,ಒಮ್ಮೆ ಅತ್ತು ಕಾರ್ನಿಕ ತೋರಿದ ಶಕ್ತಿ ಲೆಕ್ಕೆಸಿರಿ.ಅದ್ದರಿಂದ ಈ ದೈವ ಹೆಣ್ಣು ಶಕ್ತಿ ಎಂದು ಪ್ರಾಧನವಾಗುತ್ತ ಬಂತು.ಆದರೆ ಇದು ಹೆಚ್ಚಿನ ಕಡೆಗಳಲ್ಲಿ ಮೂರ್ತಿಯಲ್ಲಿ ಗಂಡು ಸ್ವರೂಪವನ್ನು ಹೊಂದಿದೆ.
ಈ ದೈವಕ್ಕೆ ಮೊದಮೊದಲು ಕೋಳಿ ಹೊರಗಡೆ ಕೊಯ್ಯುತ್ತಿದ್ದರು.ಈಗೀಗ ರಕ್ತಹಾರದ ಸೇವೆ ಇಲ್ಲ.ಇತ್ತಿಚ್ಚೆಗೆ ತೀರ ಕಮ್ಮಿ. ಹೊದ್ಲು(ಅರಳು),ಅವಲಕ್ಕಿ,ಬೆಲ್ಲ~ಬಾಲೆಹಣ್ಣು,ತೆಂಗಿನ ಕಾಯಿ ಗಡಿ,ವಿಲ್ಯದೆಲೆ ಅಡಿಕೆ ಹೊಳು ಇಟ್ಟು ತಂಬಿಲ ಮಾಡಿ,ಸೀಯಾಳ ಇಟ್ಟು ಕೈ ಮುಗಿಯುವ ದೈವ.ಒಟ್ಟಾರೆ ದೇವಕ್ರೀಯೆಯಲ್ಲಿ ಇತ್ತಿಚೆಗೆ ಸೇವೆ ಪಡೆಯುವ ಶಕ್ತಿ.ಹದಿನಾರು ಬಾಳೆಎಲೆಗಳಲ್ಲಿ ತಂಬಿಲ ಪಡೆಯುವ ಅಗಾಧ ಶಕ್ತಿಯ ಮೂಲ ದೈವ ಅಂದರೆ ಅದು ಲೆಕ್ಕೆಸಿರಿ.
ನೀರಲ್ಲಿ ನಿಗಲೆ,ನಿಗರ್,ಮರದಲ್ಲಿ ಮರಹುಲಿ,ಅಕಾಶದಲ್ಲಿ ಸಿಡಿಲು ಮಿಂಚು,ಭೂಮಿ ಹುತ್ತದಲ್ಲಿ ನಾಗರಹಾವು,ಮಾಡದಲ್ಲಿ ಲೆಕ್ಕೆಸಿರಿಯಾಗಿ ಕಾಣಿಸಿಕೊಳ್ಳುವ ಶಕ್ತಿ ಎಂದು ಲೆಕ್ಕೆಸಿರಿಯನ್ನು ಕರೆಯುತ್ತಾರೆ.ಬೆಳ್ತಂಗಡಿ ಕಡೆಯಯಲ್ಲಿ ಲೆಕ್ಕೆಸಿರಿಗೆ ನಿಗಲೆಯ ರೂಪದ ಮುಖವರ್ಣಿಕೆ ಕೂಡ ಇದೆ ಎಂದು ಹೇಳುತ್ತಾರೆ.ಲೆಕ್ಕೆಸಿರಿಗೆ ಹುಟ್ಟು ಕಥೆ ಇಲ್ಲಾವಾದರೂ ಬಾಲೆ ಪಾಪು ನೂಲ್ ಕೈ ಸಂಗಿನಿಂದ ಭೂಮಿಗೆ ಇಳಿದು ಬಂದ ಸತ್ಯ ಎಂದು ಹೇಳುತ್ತ ಪ್ರಸರಣ ಕಥೆ ಶುರುವಾಗುತ್ತದೆ.ಇದು ಬಾನು ಸೇನವ ಯಾ ಬಾನು ಸೇನಪ್ಪನಿಂದ ಅರಂಭ ಗೊಳ್ಳುತ್ತದೆ.ಹಾಗೆಯೇ ಅಣ್ಣು ಸೇನವನ ಉಲ್ಲೆಖ ಕೂಡ ಬರುತ್ತೆ.ಆದರೆ ಇಲ್ಲಿ ಎಲ್ಲೂ ಲೆಕ್ಕೆಸಿರಿ ರಕ್ತೇಶ್ವರಿ ಅದ ಕಥೆ ಇಲ್ಲ.ಅದುದರಿಂದ
ಇದು ತೀರ ಇತ್ತಿಚ್ಚಿನ ಕಥೆ ಎಂದು ನಾವು ತಿಳಿಯಬಹುದು.ಅದೂ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಶುರುವಾದ ಪದ ಈ ರಕ್ತೇಶ್ವರಿ. ಆದರೆ ಪುರಾಣದಲ್ಲಿ ಎಲ್ಲೂ ಈ ಹೆಸರು ಕೇಳಲು ಸಿಗುವುದಿಲ್ಲ.
ರಕ್ತ+ಈಶ್ವರಿ=ರಕ್ತೇಶ್ವರಿ
ಅಂದರೆ ರಕ್ತ ಕುಡಿದವಳು ಯಾ ಹೀರಿದವಳು.ಅದರೆ ರಕ್ತ ಬೀಜನನ್ನು ಕೊಂದವಳನ್ನೂ ಕೂಡ ಎಲ್ಲೂ ರಕ್ತೇಶ್ವರಿ ಎಂದು ಸಂಬೊಧಿಸಿಲ್ಲ.ಒಂದು ವೇಳೆ ರಕ್ತಬೀಜನನ್ನು ಕೊಂದವಳು ರಕ್ತೇಶ್ವರಿ ಅದರೆ ಅವಳ ಹೆಸರು ತುಳುನಾಡು ಬಿಟ್ಟು ಹೊರ ಜಿಲ್ಲೆ,ರಾಜ್ಯದಲ್ಲೂ ಅದೇ ಹೆಸರಿರ ಬೇಕಿತ್ತು. ಯಾಕೆಂದರೆ ರಕ್ತೇಶ್ವರಿ ಅನ್ನುವ ಪದ ಕನ್ನಡ.ಅದರೆ ಕನ್ನಡ ಪದದಲ್ಲೆ ಈ ಪದ ಬಾರಿ ಕಮ್ಮಿ.ರಕ್ತಬೀಜನನ್ನು ಕೊಂದವಳು ತ್ರೀಪುರ ಸುಂದರಿ ಮಹಾಕಾಳಿ ಎಂದೂ ನಾಲಗೆಯನ್ನು ಚಾಚಿದ್ದು ಚಾಮುಂಡಿ ನಂತರ ಅವಳ ಹೆಸರು ರಕ್ತದಂತಿ ಎಂದೂ ಇತರ ಕಥೆಯಲ್ಲಿ ಉಲ್ಲೆಖ ಇದೆ.ಇದು ಇಲ್ಲಿನ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ಮಾತ್ರ ನೋಡಬಹುದು.ಕಟೀಲಿನಲ್ಲಿ ಉಲ್ಲಾಲ್ದಿ ದುರ್ಗೆಯಾಗಿ,ಅದೇ ಪಾದೆ(ಬಂಡೆ) ಕಲ್ಲಿನಲ್ಲಿ ಇದ್ದ ಲೆಕ್ಕೆಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ.ಅಲ್ಲದೇ ಇನ್ನೂ ಕೆಲವು ಕಡೆ ಇದ್ದ ಲೆಕ್ಕೆಸಿರಿ ಮಾಡಗಳು ರಕ್ತೇಶ್ವರಿ ಸನ್ನಿದಿ,ಗುಡಿಗಳಾಗಿವೆ.
ಒಂದು ಕಾಲದಲ್ಲಿ ಚಾವಡಿಯ ಭಾಮದಲ್ಲಿ ಎಲ್ಲಾ ದೈವಗಳೊಂದಿಗೆ ಒಟ್ಟಿಗೆ ಅರಾಧನೆ ಪಡೆಯುತ್ತಿದ ಲೆಕ್ಕೆಸಿರಿ ಇಂದು ರಕ್ತೇಶ್ವರಿ ಎನ್ನುವ ದೇವಿ ಅಗಿ ಹೋಗುತ್ತಿರುವುದು ಅದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೊಂದಿಲ್ಲ.ಹಾಗೆಯೇ
ಒಂದು ವೇಳೆ ಭೂಮಿ ಬಾರಗ ದೈವ ಲೆಕ್ಕೆಸಿರಿ ತುಳುವರ ಯಾರೊಬ್ಬರ ರಕ್ತ ಹೀರಿದ ಉದಾಹರಣೆಯೂ ಎಲ್ಲೂ ಇಲ್ಲ.
ಹಾಗಾದರೆ ತುಳುನಾಡಿಗೆ ಇಲ್ಲಿನ ಒಂದು ಭೂಮಿ ಬಾರಗ ದೈವ,ಶಂಕರ ಬಾಲೊಲಿಯ ಜಪದ ದೈವ,
ಸಾತ್ವಿಕ ನೆಲೆಯ ದೇವ ಕ್ರೀಯೆಯ ದೈವಕ್ಕೆ
ಈ ಹೆಸರು ಹೇಗೆ ಬಂತು??
ನೀವೇ ಯೋಚಿಸಿ..!