ಪಶುಪತಿನಾಥನ ಪೂಜಾ ವಿಧಾನಗಳು ಸಂಪೂರ್ಣವಾಗಿ ವೈವಿಧ್ಯ ವಾಗಿದೆ. ಕರ್ನಾಟಕ ಆಂಧ್ರ ಮತ್ತು ತಮಿಳುನಾಡಿನ ಬ್ರಾಹ್ಮಣರ ಮೂಲಕ ಪೂಜಾವಿಧಾನವನ್ನು ನೆರವೇರಿಸಬೇಕೆಂದು ಶಂಕರಾಚಾರ್ಯರು ನೇಪಾಳದ ರಾಜನಿಗೆ ಮಾರ್ಗದರ್ಶನ ನೀಡಿದರು. ಆದಕಾರಣವೇ ತುಳುನಾಡಿನ ಮೂಲದವರಾದ ಶಿವಳ್ಳಿ ಬ್ರಾಹ್ಮಣರಿಗೆ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ತುಳು ಮತ್ತು ಕನ್ನಡ ಭಾಷೆ ಪರಸ್ಪರ ಅನ್ಯೋನ್ಯವಾಗಿದ್ದು ಪ್ರಧಾನ 2 ದ್ರಾವಿಡ ಭಾಷೆಗಳು ಇರುವ ಮಾದರಿ ರಾಜ್ಯವಾಗಿದೆ ಕರ್ನಾಟಕ. ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ ತುಳು ವಾಗಿದ್ದು ಅದಕ್ಕೆ ತಕ್ಕುದಾದ ಸ್ಥಾನಮಾನಗಳು ದೊರೆಯದ್ದು ವಿಷಾದನೀಯ. ಆದುದರಿಂದ ಕನ್ನಡಿಗರು ಸೇರಿ ತುಳು ಭಾಷೆಯ ಸ್ಥಾನಮಾನಕ್ಕೆ ಪ್ರಯತ್ನಿಸಿ ತಮ್ಮದೇ ರಾಜ್ಯದ ಇನ್ನೊಂದು ಭಾಷೆಗೆ ಸ್ಥಾನಮಾನ ದೊರಕುವಲ್ಲಿ ಪ್ರಯತ್ನಿಸಿದರೆ ತುಳು-ಕನ್ನಡ ಭಾಷೆಯ ಸಹೋದರತ್ವ ಶಾಶ್ವತವಾಗಿ ಉಳಿಯುತ್ತದೆ ಎಂದು ನೇಪಾಳದ ಕಟ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದ ಪ್ರಧಾನ ಅರ್ಚಕರಾದ ರಾವಲ್ ಗಣೇಶಭಟ್ಟ ಅವರು ಹೇಳಿದರು. ಅವರು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ತುಳು-ಕನ್ನಡ ಸ್ನೇಹ ಸಮ್ಮೇಳನವನ್ನು ತುಳು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿ ಹಣತೆಗಳನ್ನು ಬೆಳಗಿಸಿ ಉದ್ಘಾಟಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜರವರು ಮಾತನಾಡಿ ಪ್ರಾದೇಶಿಕತೆ ಉಳಿದರೆ ಮಾತ್ರವೇ ದೇಶಿಯತೆ ಉಳಿಯುತ್ತದೆ ಪ್ರಾದೇಶಿಕತೆ ಉಳಿಯಬೇಕಿದ್ದರೆ ಪ್ರಾದೇಶಿಕ ಸಂಸ್ಕೃತಿ ಮತ್ತು ಭಾಷೆಗಳನ್ನು ಮೇಲೆತ್ತುವ ಪ್ರಯತ್ನವಾಗಬೇಕು. ಪ್ರಾದೇಶಿಕತೆಯನ್ನು ಅರಿಯದೆ ಯುವಕರು ಜಾಗತಿಕ ಮಟ್ಟವನ್ನು ಪ್ರವೇಶಿಸಿದರೆ ಜೀವನದ ಸಮತೋಲನವನ್ನು ಕಾಪಾಡುವಲ್ಲಿ ವಿಫಲರಾಗುತ್ತಾರೆ. ನಾನು ಮಂಗಳೂರಿನಲ್ಲಿ ಹಲವು ವರ್ಷಗಳ ಕಾಲ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ. ತುಳುವರ ಭಾಷಾಬಾಂಧವ್ಯವನ್ನು ಅನ್ಯೋನ್ಯತೆಯನ್ನು ಚೆನ್ನಾಗಿ ತಿಳಿದಿರುವೆನು. ಆದುದರಿಂದಲೇ ನೇಪಾಳದಂತಹ ರಾಷ್ಟ್ರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿದೆ ಎಂದರು.
ತುಳುವರ್ಲ್ಡ್ ಮಂಗಳೂರು ಮತ್ತು ಸಂಭ್ರಮ ಬೆಂಗಳೂರು ಇವರು ಸಂಯುಕ್ತವಾಗಿ ಆಯೋಜಿಸಿದ ಅಂತರರಾಷ್ಟ್ರೀಯ ತುಳು ಮತ್ತು ಕನ್ನಡ ಸ್ನೇಹ ಸಮ್ಮೇಳನದ ಉದ್ಘಾಟನಾ ಸಮಾರಂಭ ನೇಪಾಳದ ಕಟ್ಮಂಡುವಿನಲ್ಲಿ ಅಮ-ದಬ್ಲಮ್ ಹೋಟೆಲ್ನಲ್ಲಿ ನಡೆಯಿತು. ಕೇರಳ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ನ್ಯಾ. ಸುಬ್ಬಯ್ಯ ರೈ, ಶ್ರೀಮತಿ ಮಂಜುಳಾ ಗಣೇಶ್ ಭಟ್ ನೇಪಾಳ, ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ಇದರ ಪ್ರಾಧ್ಯಾಪಕರಾದ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ, ಮೂಲ್ಕಿ ವಿಜಯ ಕಾಲೇಜಿನ ಟ್ರಸ್ಟಿಗಳಾದ ಶ್ರೀಮತಿ ಶಮೀನಾ ಆಳ್ವಾ, ಮಂಗಳೂರು ವಿಶ್ವವಿದ್ಯಾಲಯದ ತುಳು ಪೀಠದ ಸದಸ್ಯರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ಲ್, ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಶಾಂತ ಕುಂಟಿನಿ, ಚಲನಚಿತ್ರ ನಟಿಯರಾದ ಕುಮಾರಿ ಚೈತ್ರ ಶೆಟ್ಟಿ, ಲಕ್ಷ್ಯ ಶೆಟ್ಟಿ, ಸನಾತನಧರ್ಮ ಪ್ರಚಾರಕರಾದ ನವೀನ್ ಕುಮಾರ್, ಉದ್ಯಮಿಗಳಾದ ಲಯನ್ ಗಣೇಶ್ ಶೆಟ್ಟಿ, ಕೋಡ್ದಬ್ಬು ದೈವಸ್ಥಾನ ಪದ್ದೊಡಿ ಇದರ ಅಧ್ಯಕ್ಷರಾದ ಅಶೋಕ್ ಮಾಡ, ಭೂಷಣ್ ಕುಲಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೇಪಾಳದ ಹುಡುಗಿ ರೇಷ್ಮಾ ಅವರು ಕನ್ನಡದಲ್ಲಿ ಮಾತನಾಡಿ ಕನ್ನಡದ ಗೀತೆಗಳನ್ನು ಹಾಡಿ ನೇಪಾಳಿಗರ ಕನ್ನಡ ಪ್ರೀತಿಯ ಕಂಪನ್ನು ಮೆರೆಸಿದಳು. ಹಾಗೂ ಮೂಡುಬಿದಿರೆಯ ಹೆರಾಲ್ಡ್ ತಾವ್ರೋ ಅವರು ತುಳುವಿನಲ್ಲಿ ಗಣೇಶನ ಪ್ರಾರ್ಥನೆ ಹಾಡಿ ಸೌಹಾರ್ದತೆಗೆ ಮುನ್ನುಡಿ ಬರೆದರು. ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಬರೆದ ದೇಶದ ಚಿತ್ತ ಯುವಜನರತ್ತ ಪುಸ್ತಕವನ್ನು ನೇಪಾಳದ ಮಂಜುಳಾ ಗಣೇಶ್ ಭಟ್ ಅವರು ಬಿಡುಗಡೆಗೊಳಿಸಿದರು. ಹಾಗೂ ತುಳು ಕನ್ನಡ ಭಾಷೆಗೆ ಕೊಡುಗೆ ನೀಡಿದ ಹಲವು ಗಣ್ಯರಿಗೆ ಇಂಡೋ ನೇಪಲ್ ತುಳು ಕನ್ನಡ ಸ್ನೇಹ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಾಸ್ತಾವಿಕವಾಗಿ ತುಳುವರ್ಲ್ಡ್ ಅಧ್ಯಕ್ಷರಾದ ಡಾ. ರಾಜೇಶ್ ಆಳ್ವ ಮಾತನಾಡಿ ತುಳುನಾಡಿನ ಅದೆಷ್ಟೋ ಕನ್ನಡಿಗರು ದೇಶವಿದೇಶಗಳಲ್ಲಿ ನೆಲೆಸಿರುತ್ತಾರೆ. ಇವರು ತುಳು ಮತ್ತು ಕನ್ನಡ ಭಾಷೆಗೆ ಹಲವು ಕೊಡುಗೆಗಳನ್ನು ನೀಡಿರುತ್ತಾರೆ. ಇವರ ಭಾಷಾ ಪ್ರೇಮವನ್ನು ಸಮ್ಮಿಲಿಸ ಬೇಕು ಎಂಬ ಉದ್ದೇಶದಿಂದ ತುಳು ಕನ್ನಡ ಸ್ನೇಹ ಸಮ್ಮೇಳನವನ್ನು ದೇಶವಿದೇಶಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಈ ರೀತಿಯಾಗಿ ಭಾಷಾ ವೈಷಮ್ಯವನ್ನು ಮರೆಮಾಚಬಹುದು ಎಂಬುದು ನಮ್ಮ ಧ್ಯೇಯ ಎಂದರು. ಸಂಭ್ರಮ ಬೆಂಗಳೂರು ಇದರ ಅಧ್ಯಕ್ಷರಾದ ಜೋಗಿಲ ಸಿದ್ದರಾಜು ಅವರು ಸ್ವಾಗತಿಸಿ ತುಳುವರ್ಲ್ಡ್ ಕಾರ್ಯದರ್ಶಿ ಹರ್ಷ ರೈ ಪುತ್ರಕಳ ವಂದಿಸಿದರು. ಶೃತಿ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ವಿವಿಧ ಗೋಷ್ಠಿಗಳು ಹಾಡು ನೃತ್ಯಗಳೊಂದಿಗೆ ಸಂಪನ್ನಗೊಂಡಿತು.