Google

ICHARO

YEDDE PATHERA
Nama enchina Alochane Malpuvana Aven Prakrthi Korpundu

Translate

ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ ಇತಿಹಾಸ ಪ್ರಸಿದ್ಧ ಪುತ್ರಕಳ ಬೂಡು. ತುಳುನಾಡಿನ ಕಳರಿ ವಿದ್ಯೆಯ ಆದಿ ದೈವದ ಸಾನಿಧ್ಯ –ಕುಂಡಗರ ದೈವದ ಮೂಲಸ್ಥಾನ ಅಭಿವೃದ್ಧಿಯತ್ತ ದೈವ ಭಕ್ತರ ಚಿತ್ತ


ಬದಿಯಡ್ಕ : ಕುಂಬಳೆ ಸೀಮೆಯ ಕುಂಬ್ಡಾಜೆ ಗ್ರಾಮಕ್ಕೊಳಪಟ್ಟ ಸುಮಾರು 1800 ವರ್ಷಗಳ ಇತಿಹಾಸವನ್ನು ಹೊಂದಿರುವ ಅತಿ ಪುರಾತನ ಕಾರಣಿಕ ಸಾನಿಧ್ಯವಾದ ಪುತ್ರಕಳ ಬೂಡು ತುಳುನಾಡಿನ ಅತ್ಯಾಕರ್ಷಕ ಶೈಲಿಯ ಪ್ರಾಚೀನತೆಯನ್ನು ಹೊಂದಿದ್ದು ಇದೀಗ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ. ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಷ್ನೆಚಿಂತನೆಯಲ್ಲಿ ಕಂಡುಬಂದ ಪ್ರಕಾರ ಪುತ್ರಕಳ ಬೂಡು ಅತಿ ಪುರಾತನದಲ್ಲಿ ಜೈನ ಬಲ್ಲಾಳರ ಆ ಬಳಿಕ ಸಾಮಂತರಾಜ ಬಲ್ಲಾಳರ ಆಳ್ವಿಕೆಯಲ್ಲಿತ್ತು. ಈಗ ಇಲ್ಲಿರುವ ಸುಮಾರು 600 ವರ್ಷ ಹಳೆಯದಾದ ಪುತ್ರಕಳ ಬೂಡು  ಹಿಂದಿನ ಅದೇ ಪರಂಪರಾಗತ ಶೈಲಿಯನ್ನು ಉಳಿಸಿಕೊಂಡು ಬಂದಿದ್ದು ಹೊಸ ಜನಾಂಗದೆಡೆಯಲ್ಲಿ ಆಚ್ಚರಿ ಮೂಡಿಸುವ ಕಾರಣೀಕ ಸಾನಿಧ್ಯವಾಗಿದೆ. ಮುಳಿ ಹಾಸಿದ ಮನೆಯೊಳಗೆ ಇದೀಗ ತರವಾಡು ಹಾಗೂ ಇಲ್ಲಿ ಅತಿ ಪುರಾತನ ಕಾಲದಿಂದಲೇ ನೆಲೆಯಾಗಿರುವ ಕಾರಣಿಕ ಶಕ್ತಿಗಳಾದ ಮುಡಿಪುಣ್ಣಾಯ- ಉರ್ಮಿತ್ತಾಯ ಎಂಬ ಇರುವೆರ್ ದೈವಗಳು, ಪಿಲಿಚಾಮುಂಡಿ, ಕುಂಡಂಗರ, ಮೂವೆರ್ ಧೂಮಾವತಿ, ರಕ್ತೇಶ್ವರಿ, ಕಳರಿ ಧೂಮಾವತಿ, ಕೊರತಿ, ಗುಳಿಗ ದೈವಗಳು ಸೇರಿ ಒಂದು ಕುಂದು ನಲುವತ್ತು ದೈವಗಳ ಸಾನಿಧ್ಯ ಜೀರ್ಣಾವಸ್ಥೆಯಲ್ಲಿದೆ. 
ಪುರಾತನವಾದ ಈ ಸ್ಥಳ ಸಾನಿಧ್ಯದಲ್ಲಿ ಈ ಹಿಂದೆ ರಾಜಾಡಳಿತದ ಕಾಲದಲ್ಲಿ ಇಲ್ಲಿ ಯುದ್ಧವಿದ್ಯೆಗಳನ್ನು ಕಲಿಸುತ್ತಿದ್ದ ಸ್ಥಳವಾಗಿತ್ತು ಎಂಬ ಪ್ರತೀತಿ ಇದ್ದು ಇದಕ್ಕೆ ಸಂಬಂಧಪಟ್ಟ ಆರಾಧನೆಗಳು ಪ್ರಚಲಿತದಲ್ಲಿದೆ.
 ತುಳುನಾಡ ಕಳರಿ ವಿದ್ಯೆಯ ಅಧಿ ದೈವವಾಗಿ ಕಳರಿ ಧೂಮಾವತೀ ದೈವದ ಆರಾಧನೆ ಇಲ್ಲಿ ವಿಶೇಷವಾಗಿದೆ. 
ಅಗೆಲು ಸೇವೆಗೆ ಖ್ಯಾತಿಯಾದ ಕುಂಡಂಗರ ದೈವ: ಪುತ್ರಕಳ ಬೂಡಿನಲ್ಲಿ ನೆಲೆಯಾಗಿರುವ ಮುಡಿಪುಣ್ಣಾಯ-ಉರ್ಮಿತ್ತಾಯ ಎಂಬ ಇರುವೆರ್ ದೈವಗಳ ಪ್ರಧಾನಿಯಾಗಿರುವ ಶ್ರೀ ಕುಂಡಂಗರ ದೈವವು ಇಲ್ಲಿನ ವಿಶೇಷ ಶಕ್ತಿಯಾಗಿದೆ. ಈ ಕುಂಡಂಗರ ದೈವಕ್ಕೆ ವಿಶೇಷ ಅಗೇಲು ಸೇವೆ ನಡೆದು ಬರುವುದು ಇಲ್ಲಿನ ಪದ್ದತಿ. ಈ ಹಿಂದೆ ಇಲ್ಲಿನ ನೇಮ ಪರ್ವಗಳು ನಡೆಯುತ್ತಿದ್ದ ಆರಂಭದ ದಿನ ಕುಂಡಂಗರ ದೈವಕ್ಕೆ ಪ್ರಧಾನ್ಯತೆಯಾಗಿದ್ದು ನಾಡಿನ ಜನತೆಯ ಕಷ್ಟ ಸಂಕಷ್ಟಗಳನ್ನು ಆಲಿಸುವ ಆರಾಧ್ಯ ದೈವ ಇದಾಗಿದೆ. ಆದ್ದರಿಂದಲೇ ನೇಮದ ಪ್ರಥಮ ದಿನ ಈ ಭೂತವು ಕಟ್ಟಿದ ಕೋಲದಲ್ಲಿಯೇ ಗ್ರಾಮ ತಿರುಗಿ ಮನೆ ಮಕ್ಕಳ ಕಷ್ಟ ಕೋಟಲೆಗಳನ್ನು ಕೇಳಿಕೊಂಡು ಬರುವ ಪರಿಪಾಠ ಇಲ್ಲಿ ಹಿಂದಿನಿಂದಲೇ ನಡೆಯುತ್ತ ಬರುತ್ತಿತ್ತು. ಇದೀಗ ಈ ಎಲ್ಲಾ ದೈವ ಶಕ್ತಿಗಳ ಸಾನಿಧ್ಯಗಳು ಶಿಥಿಲಾವಸ್ಥೆಯಲ್ಲಿದೆ. ಪುತ್ರಕಳ ಬೂಡಿನ ಕುಂಡಂಗರನಿಗೆ ಒಂದು ಅಗೇಲು ಸೇವೆ ಸಮರ್ಪಿಸಿದರೆ ಜೀವನದಲ್ಲಿ ಬಂದೊದಗುವ ನಾನಾ ಕಷ್ಟ ಕಾರ್ಪಣ್ಯಗಳಿಗೆ ಶೀಘ್ರ ಪರಿಹಾರ ದೊರಕಿರುವ ಅದೆಷ್ಟೋ ನಿದರ್ಶನಗಳಿವೆ. ಈಗಲೂ ನೂರಾರು ಭಕ್ತರು ಅಗೇಲು ಸೇವೆ ಸಮರ್ಪಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಕಾರಣಿಕ ಕ್ಷೇತ್ರವು ಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ಸುಮಾರು ಮೂರು ದಶಕಗಳಿಂದ ನೇಮ ಪರ್ವಗಳು ಸ್ಥಗಿತಗೊಂಡಿತ್ತು. ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದು ಶಿಲ್ಪಿಗಳ ನಿರ್ದೇಶನದಂತೆ ಬೂಡು, ದೈವಸ್ಥಾನ, ತುಳುನಾಡ ಕಳರಿ ಮೊದಲಾದ ದೈವ ಸಾನಿಧ್ಯಗಳು ಪುನರ್‍ನಿರ್ಮಾಣ ಆಗಬೇಕಿದೆ. ಈ ಕಾರ್ಯಗಳಿಗಾಗಿ ಈಗಾಗಲೇ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿಕೊಂಡು ಊರ ಪರವೂರ ಭಕ್ತರು ಕಾರ್ಯಪ್ರವೃತ್ತರಾಗಿದ್ದಾರೆ.


Share on :

SUDDI

 

Copyright © 2011 Tuluworld - All Rights Reserved