ಬ್ಯಾಂಕಾಕಿನಲ್ಲಿ ಔಚಿತ್ಯ ಪೂರ್ಣ ಅಂತರರಾಷ್ಟ್ರೀಯ ತುಳು ಕನ್ನಡ ಸ್ನೇಹ ಸಮ್ಮೇಳನ
ಬ್ಯಾಂಕಾಕ್ : ಜಗತ್ತಿನ ಎಲ್ಲಾ ಸಂಸ್ಕೃತಿಯು ವಿವಿಧ ಭಾಷೆಯಿಂದಲೇ ಹುಟ್ಟಿಕೊಂಡಿದೆ. ಭಾಷೆಗಳು ಸ್ವೀಕರಿಸುವ ಗುಣ ಹೊಂದಬೇಕು ವಿನಹ ದೂರೀಕರಿಸುವ ಪ್ರವೃತ್ತಿಯನ್ನು ಕೈ ಬಿಡಬೇಕು. ಅವಾಗ ಮಾತ್ರ ಸೌಹಾರ್ದತೆಯ ಭಾಷ್ಯ ವನ್ನು ಬರೆಯಲು ಸಾಧ್ಯವಾಗುತ್ತದೆ ಎಂದು ಭಾರತೀಯ ವಾಯುಪಡೆಯ ನಿವೃತ್ತ ಸೈನಿಕ ಅಧಿಕಾರಿ ಎಂ ಬಿ ಖಾನ್ ಅವರು ಅಭಿಪ್ರಾಯ ಪಟ್ಟರು. ಅವರು ಬ್ಯಾಂಕಾಕ್ ನಲ್ಲಿ ನಡೆದ ಕರ್ನಾಟಕದಲ್ಲಿರುವ ಪ್ರಧಾನ ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತುಳು ಭಾಷೆಗಳ ಮಧ್ಯೆ ಸೌಹಾರ್ದ ಮೂಡಿಸುವುದಕ್ಕಾಗಿ ದೇಶ-ವಿದೇಶಗಳ ತುಳುವರನ್ನು ಮತ್ತು ಕನ್ನಡಿಗರನ್ನು ಒಟ್ಟು ಸೇರಿಸಿ ತುಳು ಕನ್ನಡ ಸ್ನೇಹ ಸಮ್ಮೇಳನ ಎಂಬ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಭ್ರಮ ಬೆಂಗಳೂರು ಮತ್ತು ತುಳುವರ್ಲ್ಡ್ ಮಂಗಳೂರು ಇವರ ನೇತೃತ್ವದಲ್ಲಿ ಬ್ಯಾಂಕಾಕ್ ತುಳುಕೂಟ ಮತ್ತು ಥಾಯ್ ಕನ್ನಡ ಬಳಗ ಥಾಯ್ಲೆಂಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಥಾಯ್ ಕನ್ನಡ ಬಳಗದ ಅಧ್ಯಕ್ಷರಾದ ರವಿ ಮೈಸೂರು ಅವರು ವಹಿಸಿದರು. ಕಾರ್ಯಕ್ರಮವನ್ನು ಸ್ನೇಹದ ಸಂಕೇತವಾಗಿ ಹಸ್ತಲಾಘವದ ಮೂಲಕ ಉದ್ಘಾಟಿಸಲಾಯಿತು.
ಬ್ಯಾಕಾಂಕ್ ತುಳುಕೂಟದ ಅಧ್ಯಕ್ಷ ನವೀನ್ ರೋಸ್ ಪಿಂಟೋ ಮಾತನಾಡಿ ತುಳುನಾಡಿನ ತುಳುವರು ಎಲ್ಲೆ ಇದ್ದರೂ ಅವರು ಸಂಘಟನೆಯಲ್ಲಿ ನಿಪುಣರು. ಮುಂದಿನ ವರ್ಷ ಬ್ಯಾಂಕೊಕ್ನಲ್ಲಿ ವಿಶ್ವ ತುಳು ಸಮ್ಮೇಳನ ಆಯೋಜಿಸಲು ತೀರ್ಮಾನ ಮಾಡಲಾಗಿದೆ. ಸಮಸ್ತ ತುಳುವರು ಇದಕ್ಕೆ ಸಹಕರಿಸಬೇಕು ಎಂದೂ ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಖ್ಯಾತ ಕನ್ನಡ ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ, ಶಮೀನಾ ಆಳ್ವ, ಅಶೋಕ್ ಮಾಡ, ಡಾ. ವಿನೋದ್ ಕುಮಾರ್. ಆಶಾ ಶೆಟ್ಟಿ ಅತ್ತಾವರ, ಶಂಕರ್ ಭಾರತಿಪುರ, ಸತೀಶ್ ಶೆಟ್ಟಿ ಬ್ಯಾಂಕಾಕ್, ಯೋಗೆಶ್ ಭಟ್ ಬ್ಯಾಂಕಾಕ್, ಡೈಜಿವಲ್ಡ್ ನಾ ವಿನ್ಸೆಂಟ್ ಡನಿಲ್, ಜೀವನ್ ಲೋಬೊ ಥಾಯ್ಲೆಂಡ್ ಮೊದಲಾದವರು ಉಪಸ್ಥಿತರಿದ್ದರು.
ಸಂಭ್ರಮ ಬೆಂಗಳೂರು ಇದರ ಅಧ್ಯಕ್ಷ ಜೋಗಿಲ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಸ್ವಾಗತಿಸಿದರು.